34ನೇ ರಾಷ್ಟ್ರೀಯ ಭೂಮಾಪನ ದಿನಾಚರಣೆ

ಗೌರಿಬಿದನೂರು,ಏ.೧೧-ದೇಶ, ರಾಜ್ಯ, ಜಿಲ್ಲೆ, ತಾಲ್ಲೂಕು, ಗ್ರಾಮ ಸೇರಿದಂತೆ ಇತರ ಗಡಿ ಭಾಗಗಳನ್ನು ಗುರ್ತಿಸುವ ಸಲುವಾಗಿ ಭೂಮಾಪನ ಇಲಾಖೆಯ ಅಧೀನದಲ್ಲಿ ಭೂಮಿಯ ಅಳತೆಯನ್ನು ಮಾಡಲಾಗುತ್ತಿದ್ದು, ಅದರ ಸವಿನೆನಪಿಗಾಗಿ ಇಲಾಖೆಯಲ್ಲಿ ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಮಾಡಲಾಗುತ್ತಿದೆ ಎಂದು ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕರಾದ ನಾಗೇಶ್ ತಿಳಿಸಿದರು.
ಹೊರವಲಯದಲ್ಲಿರುವ ಮಿನಿ ವಿಧಾನಸೌಧದಲ್ಲಿ ಆಯೋಜಿಸಿದ್ದ ’೩೪ ನೇ ರಾಷ್ಟ್ರೀಯ ಭೂಮಾಪನ ದಿನಾಚರಣೆ’ ಯನ್ನು ಉದ್ಧೇಶಿಸಿ ಅವರು ಮಾತನಾಡಿದರು.
ಭೂಮಾಪನ ಇಲಾಖೆಯು ಬ್ರಿಟೀಷರ ಕಾಲದಿಂದಲೂ ಚಾಲನೆಯಲ್ಲಿದ್ದು, ಭೂಮಿಯುಳ್ಳವರಿಂದ ವೈಜ್ಞಾನಿಕವಾಗಿ ಕಂದಾಯ ವಸೂಲಾತಿಗಾಗಿ ಶತಮಾನಗಳ ಹಿಂದೆಯೇ ನಕ್ಷೆಯನ್ನು ಸಿದ್ದಪಡಿಸಿ ಭೂಮಾಪನ ಚಟುವಟಿಕೆಗಳನ್ನು ಆರಂಭಿಸಿದ್ದರು. ಭೌಗೋಳಿಕ ಪ್ರದೇಶದಲ್ಲಿ ಗ್ರಾಮ, ಕೆರೆ ಕುಂಟೆ, ಡ್ಯಾಂ, ಅರಣ್ಯ ಪ್ರದೇಶ ಸೇರಿದಂತೆ ಇತರ ಸರ್ವೆ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗಲಾಗಿದೆ. ಇದು ಇತ್ತೀಚಿನ ದಿನಗಳಲ್ಲಿ ಆಧುನೀಕರಣಗೊಂಡಿದ್ದು ನೂತನ ತಂತ್ರಾಂಶಗಳೊಂದಿಗೆ ವಿಸ್ತ್ರತ ಮಾಹಿತಿ ಸಿಗುತ್ತಿದೆ. ಇದರಿಂದಾಗಿ ಭೌಗೋಳಿಕವಾಗಿ ನಿಖರವಾದ ಮಾಹಿತಿ ಪಡೆಯಲು ಸಾಧ್ಯವಾಗಿದೆ ಎಂದು ಹೇಳಿದರು.
ಪರವಾನಗಿ ಭೂ ಮಾಪಕರಾದ ಬಿ.ಟಿ.ಶ್ರೀನಿವಾಸಮೂರ್ತಿ ಮಾತನಾಡಿ, ವರ್ಷದ ಪ್ರತೀ ದಿನವೂ ಒಂದಲ್ಲಾ ಒಂದು ದಿನಾಚರಣೆಯನ್ನು ಆಚರಣೆ ಮಾಡುವಂತೆ ಭೂಮಾಪನ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂಧಿಯು ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಮಾಡಿಕೊಂಡು ಬರಲಾಗುತ್ತಿದೆ. ಇದರಿಂದಾಗಿ ರೈತರು, ಭೂಹಿಡುವಳಿದಾರರು ಸೇರಿದಂತೆ ಇತರರಿಗೆ ತಮ್ಮ ಆಸ್ತಿಗಳನ್ನು ಗುರ್ತಿಸಿ ಸಂರಕ್ಷಣೆ ಮಾಡಿಕೊಳ್ಳಲು ನೆರವಾಗಲಿದೆ ಎಂದು ಹೇಳಿದರು.
ಇದೇ ವೇಳೆ ಭೂಮಾಪನ ಪರ್ಯಾಯ ವೀಕ್ಷಕರಾದ ಕೃಷ್ಣಮೂರ್ತಿ, ರವೀಂದ್ರಕುಮಾರ್, ಸೂಪರ್ಡೆಂಟ್ ರಾಘವೇಂದ್ರ ನಿಂಬರಗಿ, ಹಿರಿಯ ಸರ್ಕಾರಿ ಭೂಮಾಪಕರ ಸಂಘದ ಪದಾಧಿಕಾರಿಗಳಾದ ದೇವರಾಜ್, ಅರವಿಂದರೆಡ್ಡಿ ಹಾಗೂ ಸರ್ಕಾರಿ ಮತ್ತು ಪರವಾನಗಿ ಪಡೆದ ಭೂಮಾಪಕ ಸಿಬ್ಬಂದಿ ಭಾಗವಹಿಸಿದ್ದರು.