32 ನೇ ವಾರ್ಡಿನಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದ ಕಾಂಗ್ರೆಸ್ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ಘೋಷಣೆ

ಬಳ್ಳಾರಿ, ಏ.26: ನಗರದ 32 ನೇ ವಾರ್ಡಿನಲ್ಲಿ ಮಹಾ ನಗರವಪಾಲಿಕೆ ಚುನಾವಣೆಗೆ ಒಂದು ದಿನ ಬಾಕಿ ಇರುವಾಗ ಕಾಂಗ್ರೆಸ್ ಅಭ್ಯರ್ಥಿ ಯೂಟರ್ನ್ ಹೊಡೆದು. ಸ್ಪರ್ಧೆಯಿಂದ ಹಿಂದೆ ಸರಿದು ಪಕ್ಷೇತರ ಅಭ್ಯರ್ಥಿಗೆ ಬೆಂಬಲ ಘೋಷಣೆ ಮಾಡಿದ್ದಾರೆ.
32ನೇ ವಾರ್ಡ್ ನ ಸ್ಪರ್ಧಾ ಕಣದಿಂದ ಹಿಂದೆ ಸರಿದ ಕಾಂಗ್ರೆಸ್ ಅಭ್ಯರ್ಥಿ ಚಾಮುಂಡೇಶ್ವರಿ ನಾಗರಾಜ್ ಪಕ್ಷೇತರ ಅಭ್ಯರ್ಥಿ ಮಂಜುಳಾ ಉಮಾಪತಿಗೆ ಬೆಂಬಲ ಸೂಚಿಸಿ ತಾವು ತಟಸ್ಥರಾಗಿರಲು ನಿರ್ಧಾರ ಪ್ರಕಟಿಸಿದ್ದಾರೆ.
ಇಂದು ಬೆಂಬಲಿಗರೊಂದಿಗೆ ತೆರಳಿ ನಗರದ ಬಂಡಿಹಟ್ಟಿಯ ಗ್ರಾಮದೇವತೆ ರಾಮುಲಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಉಭಯ ಅಭ್ಯರ್ಥಿಗಳು ಮೆರವಣಿಗೆ ನಡೆಸಿದರು.
ವಾರ್ಡನ ಸಮುದಾಯದ ಹಿರಿಯರ ಸಲಹೆ ಮೇರೆಗೆ ಪಕ್ಷೇತರ ಅಭ್ಯರ್ಥಿ ಮಂಜುಳಾ ಉಮಾಪತಿಗೆ ಬೆಂಬಲ ಸೂಚಿಸುತ್ತಿರುವುದಾಗಿ ಕಾಂಗ್ರೇಸ್ ಅಭ್ಯರ್ಥಿ ಪತಿ ಬಂಡಿಹಟ್ಟಿ ನಾಗರಾಜ್ ಸಹ ಹೇಳಿದ್ದಾರೆ.
ಇದರಿಂದಾಗಿ ಪಕ್ಷೇತರ ಅಭ್ಯರ್ಥಿ ಮಂಜುಳಾ ಉಮಾಪತಿಗೆ ಗೆಲ್ಲಲು ಹಾದಿ ಸುಲಭವಾದಂತಾಗಿದೆ.
ಈ‌ ಮೊದಲೇ ಮಂಜುಳಾ ಉಮಾಪತಿ ಕಾಂಗ್ರೆಸ್ ಪಕ್ಷದ ಟಿಕೆಟ್ ಕೋರಿದ್ದರು. ಅವರಿಗೆ ಕ್ಷೇತ್ರದ ಶಾಸಕರೂ ಆಗಿರುವ ನಾಗೇಂದ್ರ ಅವರು ಸಹ ಬೆಂಬಲ‌ ವ್ಯಕ್ತಪಡಿಸಿದ್ದರು. ಆದರೆ ಪಕ್ಷದಲ್ಲಿನ ನಾಯಕರ ಒಳ ಜಗಳದಿಂದ‌ ಇದೇ ವಾರ್ಡಿನ ಈ ಹಿಂದಿನ ಮಾಜಿ ಕಾರ್ಪೊರೇಟರ್ ಆಗಿದ್ದ ನಾಗರಾಜ್ ಪತ್ನಿ ಚಾಮುಂಡೇಶ್ವರಿ ಅವರಿಗೆ ಟಿಕೆಟ್ ನೀಡಲಾಗಿತ್ತು.
ಜಿದ್ದಿಗೆ ಬಿದ್ದ ಶಾಸಕರ ಬೆಂಬಲಿಗರು ಕಾಂಗ್ರೆಸ್ ಅಭ್ಯರ್ಥಿಪರ ಕೆಲಸ ಮಾಡದ ಕಾರಣ ಇದನ್ನರಿತ ಅವರು ವಿನಾ ಕಾರಣ ಸ್ಪರ್ಧೆ ಮಾಡುವುದರಿಂದ ಪ್ರತಿ ಪಕ್ಷ ಬಿಜೆಪಿಗೆ ಸಹಕಾರಿ ಆಗಬಹುದೆಂದು ಹಿಂದೆ ಸರಿಯಲಾಗಿದೆಂದು ತಿಳಿದು‌ಬಂದಿದೆ.