
ಹುಲಸೂರ:ಅ.6: ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ‘ಹರ್ ಘರ್ ತಿರಂಗಾ’ ಅಭಿಯಾನ ಹಮ್ಮಿಕೊಂಡಿದೆ. ಪ್ರತಿಯೊಬ್ಬರೂ ಮನೆಗಳ ಮೇಲೆ ರಾಷ್ಟ್ರ ಧ್ವಜಾರೋಹಣ ಮಾಡಬೇಕು ಎಂದು ಮನವಿ ಮಾಡಿದೆ.
ಅದಕ್ಕಾಗಿ ಕರ್ನಾಟಕ ರಾಜ್ಯ ಗ್ರಾಮೀಣ ಸಂಸ್ಥೆಯು ಜೀವನೋಪಾಯ ಅಭಿಯಾನದಡಿ ಸ್ವಸಹಾಯ ಸಂಘಗಳ ಸದಸ್ಯರ ಮೂಲಕ ಧ್ವಜ ತಯಾರಿಸುತ್ತಿದೆ.
ಪ್ರತಿ ಪಂಚಾಯಿತಿಯು ?40ಕ್ಕೆ ಒಂದರಂತೆ 20*30ರ ಒಟ್ಟು 450 ಧ್ವಜಗಳನ್ನು ಖರೀದಿಸಬೇಕು ಎಂದು ಪಂಚಾಯಿತಿಗಳಿಗೆ ಜಿಲ್ಲಾ ಪಂಚಾಯಿತಿ ಸೂಚನೆ ನೀಡಿದೆ.
ಧ್ವಜ ತಯಾರಿಸುವ ಕೆಲಸಕ್ಕೆ ಹುಮನಾಬಾದ್ ತಾಲ್ಲೂಕಿನ ಕಲ್ಲೂರ ಗ್ರಾಮ ಪಂಚಾಯಿತಿ ಮಟ್ಟದ ಮಹಿಳಾ ಒಕ್ಕೂಟವನ್ನು ನೋಡಲ್ ಒಕ್ಕೂಟವನ್ನಾಗಿ ಆಯ್ಕೆ ಮಾಡಲಾಗಿದೆ. ತಾಲ್ಲೂಕಿನ ನಾಲ್ಕು ಗ್ರಾಮಗಳ ಸ್ವಸಹಾಯ ಸಂಘಗಳ ಮಹಿಳೆಯರು 3150 ರಾಷ್ಟ್ರಧ್ವಜ ತಯಾರಿಸಿರುವ ಕಾರ್ಯದಲ್ಲಿ ತೊಡಗಿದ್ದಾರೆ.
ಬೇಲೂರು, ಹುಲಸೂರ, ಗಡಿಗೌಡಗಾಂವ ಹಾಗೂ ಗೋರ್ಟಾ(ಬಿ) ಗ್ರಾಮಗಳ ಸಂಘಗಳಿಗೆ ಈ ಅವಕಾಶ ಲಭಿಸಿದೆ. 2 ಸಾವಿರ ಧ್ವಜ ತಯಾರಿಸಲು ತಿಳಿಸಲಾಗಿದೆ.
ಈ ಸಂಘಗಳ ಸದಸ್ಯರು ಗುರುವಾರ ಸುಮಾರು 1350 ಧ್ವಜ ತಯಾರಿಸಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವ ಬೆಂಬೂಳಗೆ ಅವರಿಗೆ ಒಪ್ಪಿಸಿದರು.
ಎರಡು ದಿನಗಳಲ್ಲಿ ಉಳಿದ ಧ್ವಜ ತಯಾರಿಸಿ ಹಸ್ತಾಂತರಿಸಲಾಗುವುದು ಎಂದು ಮಹಿಳೆಯರು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮಹಾದೇವ ಜಮ್ಮು, ಪಿಡಿಒ ಭೀಮಣ್ಣ ಹಲಿಂಗೆ ಹಾಗೂ ಮಹಾದೇವ ಪಟ್ನೆ ಇದ್ದರು.