31ರಂದು ಯುವತಿಯರ ಬೈಕ್ ರ್ಯಾಲಿ: ಆ.1ರಿಂದ 11ನೇ ರಾಜ್ಯ ಜನವಾದಿ ಸಮ್ಮೇಳನ

ಕಲಬುರಗಿ ಜು 25: ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ 11ನೇ ರಾಜ್ಯ ಸಮ್ಮೇಳನವು ಬರುವ ಆಗಸ್ಟ್ 1ರಿಂದ 3ರವರೆಗೆ ಕಲಬುರಗಿಯಲ್ಲಿ ಮೂರು ದಿನಗಳ ಕಾಲ ನಡೆಯಲಿದೆ ಎಮದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಕೆ. ನೀಲಾ ಹಾಗೂ ಡಾ. ಮೀನಾಕ್ಷಿ ಬಾಳಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಇಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ನಗರದ ಕೋಟನೂರ ಬಳಿ ಇರುವ ಶ್ರೀಗುರು ವಿದ್ಯಾಪೀಠದ ಸಭಾಂಗಣದಲ್ಲಿ ಆ.1 ಮತ್ತು 2ರಂದು ಎರಡು ದಿನಗಳ ಕಾಲ ಪ್ರತಿನಿಧಿಗಳ ಸಮಾವೇಶ ಜರುಗಲಿದೆ, ಆ. 3ರಂದು ನಗರದ ಗಂಜ್‍ನಿಂದ ಸೂಪರ್ ಮಾರ್ಕೆಟ್ ವರೆಗೆ ಮಹಿಳಾ ಅಸ್ಮಿತೆ ಬಿಂಬಿಸುವ ಬೃಹತ್ ಮೆರವಣಿಗೆ ಜರುಗಲಿದೆ ಎಂದು ವಿವರಿಸಿದರು.
ಮೊದಲ ಎರಡು ದಿನ ನಡೆಯುವ ಸಮಾವೇಶದಲ್ಲಿ ವಿವಿಧ ಜಿಲ್ಲೆಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿ ರಾಜ್ಯ ಸಮ್ಮೇಳನದಿಂದ ರಾಷ್ಟ್ರ ಸಮ್ಮೆಳನಕ್ಕೆ ಪ್ರತಿನಿಧಿಗಳ ಆಯ್ಕೆ ನಡೆಯಲಿದೆ. ನಂತರ ರಾಜ್ಯದ ಹೊಸ ಸಮಿತಿ ಆಯ್ಕೆಯೊಂದಿಗೆ ರಾಷ್ಟ್ರ ಸಮ್ಮೇಳನಕ್ಕೆ ಸಿದ್ದತೆ ನಡೆಯುತ್ತದೆ ಎಂದರು.
ಇದಕ್ಕೂ ಮುನ್ನ ಜು.31ರಂದು ಬೆಳಿಗ್ಗೆ ಯುವತಿಯರು ಜಗತ್ ವೃತ್ತದಿಂದ ಖಾಜಾ ಬಂದೇನವಾಜ್ ದರ್ಗಾ, ಚರ್ಚ್, ಶರಣಬಸವೇಶ್ವರ ದೇವಸ್ಥಾನಕ್ಕೆ ಬೈಕ್ ರ್ಯಾಲಿ ಮೂಲಕ ತೆರಳಿ ಮಹಿಳೆಯರಲ್ಲಿ ಜಾತಿಮತವಿಲ್ಲ ಎಂಬ ಸಂದೇಶ ಸಾರಲಾಗುವುದು. ಜೊತೆಗೆ ಕೆಲವು ಕಾಲೇಜುಗಳಲ್ಲಿ ಉಪನ್ಯಾಸ ಕಾರ್ಯಕ್ರಮಗಳು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು. ರಾಜ್ಯ ಸಮ್ಮೇಳನದಲ್ಲಿ ಸುಮಾರು 350ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳುತ್ತಿರುವುದರಿಂದ ಮಹಿಳೆಯರ ಮೇಲಿನ ದೌರ್ಜನ್ಯ, ಅವಮರ್ಯಾದಾ ಹತ್ಯೆಗಳನ್ನು ತಡೆಯಲು ಕಾನೂನು ಜಾರಿ, ಮಾರಕವಾಗಿರುವ ಮತಾಂತರ ರದ್ದುಗೊಳಿಸುವುದು, ಬೆಲೆ ಏರಿಕೆ ತಡೆಗಟ್ಟುವುದು ಸೇರಿದಂತೆ ವಿವಿಧ ಪ್ರಮುಖ ಅಂಶಗಳ ಮೇಲೆ ಚರ್ಚೆ ನಡೆಯಲಿದೆ ಎಂದರು.ಸಮ್ಮೇಳನದ ಪ್ರಯುಕ್ತ ಸಮಿತಿಗಳನ್ನು ರಚಿಸಲಾಗಿದ್ದು, ಸಮಿತಿಯ ಅಧ್ಯಕ್ಷರಾಗಿ ಕನೀಜ್ ಫಾತಿಮಾ, ಉಪಾಧ್ಯಕ್ಷರಾಗಿ ಕೆ. ನೀಲಾ, ಡಾ.ರಮೇಶ ಲಂಡನಕರ್, ಡಾ. ಶಾಂತಾ ಅಷ್ಟಗಿ ಸೇರಿದಂತೆ ಹಲವರನ್ನು ಆಯ್ಕೆ ಮಾಡಲಾಗಿದೆ. ಪ್ರಧಾನ ಕಾರ್ಯದರ್ಶಿಯಾಗಿ ಡಾ. ಮೀನಾಕ್ಷಿ ಬಾಳಿ, ಮೀನಾಕುಮಾರ ಕಾರ್ಯದರ್ಶಿ, ಖಜಾಂಚಿಯಾಗಿ ಜಗದೇವಿ ನೂಲಕರ್ ಸೇರಿದಂತೆ ಅನೇಕರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಶಾಸಕಿ ಕನೀಜ್ ಫಾತಿಮಾ, ಪದ್ಮಿನಿ ಕಿರಣಗಿ, ಚಂದಮ್ಮ ಗೋಲಾ, ಜಗದೇವಿ ಉಪಸ್ಥಿತರಿದ್ದರು.