30 ಲಕ್ಷ ಪರಿಹಾರಕ್ಕೆ ಶಿಕ್ಷಕರ ಸಂಘ ಆಗ್ರಹ

ಕೋಲಾರ,ಮೇ.೨೮: ಕೋವಿಡ್-೧೯ ವಾರಿಯರ್ ಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಮೂಲ ಸೌಲಭ್ಯಗಳನ್ನು ಒದಗಿಸುವಂತೆ ಹಾಗೂ ಕೋವಿಡ್ ಕಾರ್ಯದಲ್ಲಿ ಭಾಗವಹಿಸಿ ಮರಣ ಹೊಂದಿದ ಶಿಕ್ಷಕರಿಗೆ ತಕ್ಷಣ ೩೦ ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ಆಗ್ರಹಿಸಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಸಂಘದ ಅಧ್ಯಕ್ಷ ಅಪ್ಪಯ್ಯಗೌಡ, ಕೋವಿಡ್ ಕಾರ್ಯಗಳಲ್ಲಿ ವಾರಿಯರ್ಸ್ ಆಗಿ ಕೆಲಸಮಾಡಿದ ಶಿಕ್ಷಕರಲ್ಲಿ ಹಲವಾರು ಮಂದಿ ಸೋಂಕಿಗೆ ತುತ್ತಾಗಿದ್ದಾರೆ ಮತ್ತೆ ಕೆಲವರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.
ಸರ್ಕಾರ ಕೋವಿಡ್ ವಾರಿಯರ್ಸ್‌ಗೆ ವಿಶೇಷ ಪರಿಹಾರ ನೀಡುತ್ತಿದೆ ಹಾಗೆಯೇ ಶಿಕ್ಷಕರನ್ನು ಪರಿಗಣಿಸಬೇಕು ಎಂದ ಅವರು, ಅದೇ ರೀತಿ ಕಳೆದ ನಗರಸಭೆ,ಪುರಸಭೆ,ಗ್ರಾ.ಪಂ ಚುನಾವಣಾ ಕಾರ್ಯದಲ್ಲಿ ಭಾಗವಹಿಸಿ ಮೃತರಾದ ಶಿಕ್ಷಕರಿಗೂ ಸಹ ಸೂಕ್ತ ಪರಿಹಾರವನ್ನು ನೀಡಲು ಒತ್ತಾಯಿಸಿದರು.
ಕೋವಿಡ್ ಮಹಾಮಾರಿ ಇರುವಾಗಲೇ ಚುನಾವಣೆ ನಡೆದಿದ್ದು, ಶಿಕ್ಷಕರು ಚುನಾವಣಾ ಕಾರ್ಯವನ್ನು ನಿರ್ವಹಿಸಿದ್ದಾರೆ, ಈಸಂದರ್ಭದಲ್ಲಿ ಹಲವು ಶಿಕ್ಷಕರು ಸೋಂಕಿಗೆ ಬಲಿಯಾಗಿದ್ದು, ಅವರನ್ನೂ ಕೋವಿಡ್ ವಾರಿಯರ್ಸ್ ಎಂದು ಪರಿಗಣಿಸಿ ೩೦ ಲಕ್ಷ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿಗಳಿಗೆ ಮನವಿಸಲ್ಲಿಸಿದ ಸಂದರ್ಭದಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್, ಶಿಕ್ಷಕರ ಸಂಘದ ಇಂಚರ ನಾರಾಯಣ ಸ್ವಾಮಿ ಮತ್ತು ಬಂಗಾರಪೇಟೆ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಲ್.ರಾಜಪ್ಪ ಮತ್ತಿತರರಿದ್ದರು.