30 ಮೆಟ್ರಿಕ್ ಟನ್ ಸಾಮಥ್ರ್ಯದ ಫೀಡ್ಸ ಫ್ಯಾಕ್ಟರಿ ತೆರೆಯಲು ಚಿಂತನೆ

ಪಿರಿಯಾಪಟ್ಟಣ:ಏ:20: ತಾಲ್ಲೂಕಿನಲ್ಲಿ ಮೂವತ್ತು ಮೆಟ್ರಿಕ್ ಟನ್ ಸಾಮಥ್ರ್ಯದ ಫೀಡ್ಸ ಫ್ಯಾಕ್ಟರಿ ತೆರೆಯಲು ಚಿಂತನೆ ನಡೆಸಲಾಗುತ್ತಿದೆ ಎಂದು ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ತಿಳಿಸಿದರು.
ಪಟ್ಟಣದ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಪಿಎಸಿಸಿಎಸ್‍ಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಬಹುತೇಕ ಕೃಷಿ ಪ್ರಧಾನವಾಗಿರುವ ತಾಲ್ಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಮುಸುಕಿನ ಜೋಳವನ್ನು ಬೆಳೆಯುತ್ತಿದ್ದು ದಾವಣಗೆರೆ, ಶಿವಮೊಗ್ಗ, ತಮಿಳುನಾಡು ಸೇರಿದಂತೆ ವಿವಿಧ ಸ್ಥಳಗಳಿಗೆ ಮಾರಾಟ ಮಾಡುತ್ತಿದ್ದಾರೆ. ತಾಲ್ಲೂಕಿನ ರೈತನಿಂದಲೇ ಮುಸುಕಿನ ಜೋಳವನ್ನು ಖರೀದಿಸಿ ರಾಸುಗಳಿಗೆ ಮೇವಿನ ಕೊರತೆಯನ್ನು ನೀಗಿಸಲು ಫೀಡ್ಸ ಫ್ಯಾಕ್ಟರಿ ತೆರೆಯಲು ಈಗಾಗಲೇ ಉನ್ನತ ಮಟ್ಟದಲ್ಲಿ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು. ತಾಲ್ಲೂಕಿನಲ್ಲಿ ಸೀಗೂರು ಬಳಿಯ ಕಾಟನ್ ಫ್ಯಾಕ್ಟರಿ ಹೊರತುಪಡಿಸಿ ಬೇರೆ ಯಾವ ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿಲ್ಲ ಇದರಿಂದಾಗಿ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದೆ, ಅವರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಫೀಡ್ಸ ಫ್ಯಾಕ್ಟರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮೈಮುಲ್ ನಲ್ಲಿ ಪ್ರತಿನಿತ್ಯ 2 ರಿಂದ 3 ಲಕ್ಷ ಲೀಟರ್ ಹಾಲು ಉಳಿಕೆಯಾಗುತ್ತಿದ್ದು ಇದನ್ನು ಪೌಡರ್ ಆಗಿ ಪರಿವರ್ತಿಸಲು ಬೆಂಗಳೂರು, ರಾಮನಗರ ಮತ್ತಿತರ ಕೇಂದ್ರಗಳಿಗೆ ಹಾಲನ್ನು ಸಾಗಾಣಿಕೆ ಮಾಡಲಾಗುತ್ತಿದೆ.
ಈ ಸಾಗಾಣಿಕೆ ವೆಚ್ಚವನ್ನು ಉಳಿಸಲು ಅಂದಾಜು 50 ಕೋಟಿ ರೂ ವೆಚ್ಚದಲ್ಲಿ ಮೈಸೂರಿನಲ್ಲಿಯೇ ಹಾಲಿನ ಪೌಡರ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಸರಕಾರ ಹಾಗೂ ಕೆಎಂಎಫ್ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ನಂದಿನಾಥಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಮೈಮುಲ್ ನಿರ್ದೇಶಕ ಎಚ್.ಡಿ.ರಾಜೇಂದ್ರ ಮಾತನಾಡಿ ಜಿ.ಟಿ. ದೇವೇಗೌಡರ ಸಂಘಟನೆ ಶಕ್ತಿಯಿಂದಾಗಿ ಮೈಮುಲ್ ನಲ್ಲಿ ಅವರ ಬಣದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸುವ ಮೂಲಕ ಜಿಲ್ಲೆಯ ಹಾಲು ಉತ್ಪಾದಕರ ಸರ್ವಾಂಗಿಣ ಸಮಸ್ಯೆಗಳಿಗೆ ಸ್ಪಂದಿಸಲಿದ್ದಾರೆ ಎಂದರು.
ಇತ್ತೀಚಿನ ದಿನಗಳಲ್ಲಿ ಸಹಕಾರ ಸಂಘ ಗಳಲ್ಲಿ ಕರ್ತವ್ಯ ನಿರ್ವಹಿಸುವುದು ದುಸ್ತರವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು ಸಹಕಾರ ಸಂಘದ ಆದಾಯ ಕ್ಷೀಣಿಸುತ್ತಿದೆ ಆದರೆ ಷೇರುದಾರರ ನಿರೀಕ್ಷೆಗಳು ಹೆಚ್ಚುತ್ತಿದೆ ಎಂದರು.
ಸಹಕಾರ ಸಂಘಗಳಲ್ಲಿನ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಜಿಲ್ಲಾ ಬ್ಯಾಂಕ್ ನಿರ್ದೇಶಕರ ನೇತೃತ್ವದಲ್ಲಿ ಬೆಂಗಳೂರಿಗೆ ತೆರಳಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಬ್ಯಾಂಕ್ ನಿರ್ದೇಶಕ ಸಿ.ಎನ್.ರವಿ, ಟಿ ಎ ಪಿ ಸಿ ಎಂ ಎಸ್ ಅಧ್ಯಕ್ಷ ಎಸ್.ವಿ.ತಿಮ್ಮೇಗೌಡ ಮಾತನಾಡಿದರು.
ಎಂಡಿಸಿಸಿ ಬ್ಯಾಂಕ್‍ನ ಮೇಲ್ವಿಚಾರಕರಾದ ಲಿಂಗರಾಜು, ಶಿವಕುಮಾರ್, ಜಗದೀಶ್, ಸಿಇಒ ಗಳಾದ ಗಿರೀಶ್, ಪ್ರವೀಣ್, ಸತೀಶ್, ಮಹದೇವ್, ಶಿವಣ್ಣ , ಆದಿಲ್ ಖಾನ್ ಹುಚ್ಚಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.