3.86 ಲಕ್ಷ ಅಧಿಕ ಮಂದಿಗೆ ಸೋಂಕು 3948 ಮಂದಿ ಬಲಿ

ನವದೆಹಲಿ,ಏ.೩೦-ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ ಮಹಾಮಾರಿಯ ರುದ್ರನರ್ತನಕ್ಕೆ ಭಾರತ ಬೆಚ್ಚಿ ಬಿದ್ದಿದೆ. ದೇಶದಲ್ಲಿ ಹೆಚ್ಚುತ್ತಿರುವ ಸೋಂಕು ಮತ್ತು ಸಾವಿಗೆ ಜಗತ್ತಿನ ಅನೇಕ ದೇಶಗಳು ಆತಂಕ ವ್ಯಕ್ತಪಡಿಸಿ ನೆರವಿನ ಭರವಸೆ ನೀಡಿದ್ದಾರೆ.
ಈ ನಡುವೆ ದೇಶದಲ್ಲಿ ಕೊರೊನಾ ಸೋಂಕು ೩.೮೬ ಲಕ್ಷಕ್ಕೂ ಅಧಿಕ ಮಂದಿಗೆ ತಗುಲಿದೆ. ೩೪೯೮ ಮಂದಿ ಸಾವನ್ನಪ್ಪಿದ್ದು ಸಾವು ಮತ್ತು ಸೋಂಕಿನಲ್ಲಿ ಭಾರತ ವಿಶ್ವದಲ್ಲಿ ಮತ್ತೊಮ್ಮೆ ದಾಖಲೆ ಬರೆದಿದೆ.ದೇಶದಲ್ಲಿ ಒಟ್ಟಾರೆ ಸೋಂಕಿನ ಸಂಖ್ಯೆ ೧.೮೭ ಕೋಟಿ ದಾಟಿದೆ.
ಮತ್ತೊಂದೆಡೆ ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಸಂಖ್ಯೆಯಿಂದ ಆಸ್ಪತ್ರೆಗಳಲ್ಲಿ ಅಕ್ಷರಷಃ ಕೊರೊನಾ ಸೋಂಕಿತರು ನರಕಯಾತನೆ ಪಡುವ ಸ್ಥಿತಿ ನಿರ್ಮಾಣವಾಗಿದೆ, ಹಾಸಿಗೆ, ಆಮ್ಲಜನಕ, ರೆಮಿಡಿಸಿವಿರ್ ಸೇರಿದಂತೆ ಅಗತ್ಯ ವೈದ್ಯಕೀಯ ಸೇವೆ ಸಿಗದೆ ನರಳಾಡುವಂತಾಗಿದೆ.
ದೇಶದಲ್ಲಿ ಕೊರೊನಾ ಸೋಂಕಿನ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದು ದೇವರೇ ಭಾರತವನ್ನು ಕಾಪಾಡಬೇಕಾಗಿದೆ. ಆಸ್ಪತ್ರೆ ಒಳಗೆ ಹೊರಗೆ ರೋಗಿಗಳು ಮತ್ತು ಅವರ ಸಂಬಂಧಿಕರ ಚಡಪಡಿಕೆ,ಸೂಕ್ತ ಚಿಕಿತ್ಸೆಗೆ ಪರದಾಟ ಹೇಳತೀರದಾದಿದೆ.
ಮಹಾರಾಷ್ಟ್ರದಲ್ಲಿ ೬೭ ಸಾವಿರಕ್ಕೂ ಹೆಚ್ಚಿನ ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಉಳಿದಂತೆ ಉತ್ತರ ಪ್ರದೇಶ, ಕರ್ನಾಟಕ, ಕೇರಳದಲ್ಲಿ ೩೫ ಸಾವಿರಕ್ಕೂ ಹೆಚ್ಚಿನ ಮಂದಿಗೆ ಸೋಂಕು ಕಾಣಿಸಿಕೊಂಡಿದೆ.
ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು,ಆಂದ್ರ ಪ್ರದೇಶ,ತೆಲಂಗಾಣ, ಮಧ್ಯ ಪ್ರದೇಶ, ಛತ್ತೀಸ್‌ಗಡ, ಚಂಡಿಗಡ, ದೆಹಲಿ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ,ರಾಜಸ್ತಾನ, ಪಂಜಾಬ್ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಸೋಂಕು ಹೆಚ್ಚುತ್ತಿರುವುದು ಕೇಂದ್ರ ಮತ್ತು ಮತ್ತು ರಾಜ್ಯ ಸರ್ಕಾರಗಳಿಗೆ ಸೋಂಕು ನಿಯಂತ್ರಣ ಮಾಡುವುದು ಹೇಗೆ ಎಂದು ತಿಳಿಯದೆ ಮಂಕು ಕವಿದಂತಾಗಿದೆ.
೩.೮೬ ಲಕ್ಷ ಮಂದಿಗೆ ಸೋಂಕು:
ದೇಶದಲ್ಲಿ ಕಳೆದ ಹಲವು ದಿನಗಳಿಂದ ಕೊರೊನಾ ಸೋಂಕು ಸಂಖ್ಯೆ ೩ ಲಕ್ಷ ಗಡಿ ದಾಟಿ ಮುನ್ನುಗ್ಗುತ್ತಿದ್ದು ಕಳೆದ ೨೪ ಗಂಟೆಗಳಲ್ಲಿ ೩,೮೬,೪೫೨ ಮಂದಿಗೆ ಸೋಂಕು ಕಾಣಿಸಿಕೊಂಡು ೩,೪೯೮ ಮಂದಿ ಮೃತಪಟ್ಟಿದ್ದಾರೆ. ಜೊತೆಗೆ ೨,೯೭,೫೪೦ ಮಂದಿ ವಿವಿಧ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇಂದು ಬೆಳಗ್ಗೆ ೮ ಗಂಟೆಯವರೆಗೆ ದಾಖಲಾದ ಒಟ್ಟಾರೆ ಸೋಂಕಿನ ಸಂಖ್ಯೆ ೧,೮೭,೬೨,೯೭೬ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ ೧,೫೩,೮೪,೪೧೮ಕ್ಕೆ ಹೆಚ್ಚಳವಾಗಿದೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ೨,೦೮,೩೩೦ಕ್ಕೆ ಏರಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.
೩೧ ಲಕ್ಷ ದಾಟಿದ ಸಕ್ರಿಯ ಪ್ರಕರಣ
ದೇಶದಲ್ಲಿ ನಿತ್ಯ ಕೊರೊನಾ ಸೋಂಕು ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೩೧ ಲಕ್ಷ ದಾಟಿದೆ. ಕಳೆದ ೨ ತಿಂಗಳ ಹಿಂದೆ ಈ ಸಂಖ್ಯೆ ಕೇವಲ ೧,೩೫ ಲಕ್ಷ ಇತ್ತು. ಈ ಸಂಖ್ಯೆ ಇದೀಗ ೩೦ ಲಕ್ಷ ಗಡಿ ದಾಟಿದೆ.
ಸದ್ಯ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೩೧,೭೦,೨೨೮ಕ್ಕೆ ಏರಿಕೆಯಾಗಿದೆ. ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದುವರೆಗೆ ೧೫,೨೨,೪೫,೧೭೯ ಮಂದಿಗೆ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಶೇ.೧೬.೯೦ ರಷ್ಟು ಪ್ರಕರಣ
ದೇಶದಲ್ಲಿ ನಿತ್ಯ ದಾಖಲಾಗುತ್ತಿರುವ ಒಟ್ಟಾರೆ ಸೋಂಕಿನಲ್ಲಿ ಸದ್ಯ ದೇಶದಲ್ಲಿ ೧೬.೯೦ ರಷ್ಟು ಮಂದಿಗೆ ಸಕ್ರಿಯ ಪ್ರಕರಣಗಳಿವೆ. ಸೋಂಕು ನಿತ್ಯ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿನ ಚೇತರಿಕೆ ಪ್ರಮಾಣ ೯೭,೦೬ ರಿಂದ ೮೧,೯೯ಕ್ಕೆ ಕುಸಿದಿದೆ.
ಕಳೆದ ೨೪ ಗಂಟೆಗಳಲ್ಲಿ ದೇಶದಲ್ಲಿ ೧,೯೨,೦೧,೧೦೭ ಮಂದಿಗೆ ಕೊರೊನಾ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದ್ದು ದೇಶದಲ್ಲಿ ಇದುವರೆಗೆ ೨೮,೬೩,೯೨,೦೮೬ ಮಂದಿಗೆ ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ-ಐಸಿಎಂಆರ್ ತಿಳಿಸಿದೆ.