3.5 ಲಕ್ಷ ಮೌಲ್ಯದ ಮದ್ಯ ವಶ

ಬೀದರ:ಮಾ.28: ಅಬಕಾರಿ ಇಲಾಖೆಯ ಅಧಿಕಾರಿಗಳು ಹತ್ತು ದಿನಗಳ ಅವಧಿಯಲ್ಲಿ ಬಸವಕಲ್ಯಾಣ ತಾಲ್ಲೂಕಿನ ವಿವಿಧೆಡೆ ದಾಳಿ ನಡೆಸಿ ಕಾರು, ದ್ವಿಚಕ್ರ ವಾಹನ ಸೇರಿ ₹ 3.5 ಲಕ್ಷ ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಂಡಿದ್ದಾರೆ.

ಮಾರ್ಚ್ 16ರಿಂದ 26ರ ವರೆಗೆ 33 ಕಡೆ ದಾಳಿ ನಡೆಸಿ 22 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಅಕ್ರಮ ಮದ್ಯ ಮಾರಾಟ ಮಾಡಿದ ಆರೋಪದ ಮೇಲೆ 19 ಜನರನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ ಒಂದು ಕಾರು, ನಾಲ್ಕು ದ್ವಿಚಕ್ರ ವಾಹನ ಸೇರಿ ಒಟ್ಟು 7 ವಾಹನಗಳು, 283 ಲೀಟರ್‌ ಮದ್ಯ ಹಾಗೂ 22 ಲೀಟರ್ ಬಿಯರ್ ವಶ ಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಮಂಜುನಾಥ ತಿಳಿಸಿದ್ದಾರೆ.

ಬಸವಕಲ್ಯಾಣ ತಾಲ್ಲೂಕಿನ ಮಂಠಾಳದಲ್ಲಿ ಆರೋಪಿಯನ್ನು ಬಂಧಿಸಿ 13 ಬಿಯರ್‌ ಬಾಟಲಿ, ನಾರಾಯಣಪುರ ಬಳಿ ಕಾರು ಹಾಗೂ ದ್ವಿಚಕ್ರ ವಾಹನಗಳಲ್ಲಿ 24 ಬಾಕ್ಸ್‌ಗಳಲ್ಲಿ ಸಾಗಿಸುತ್ತಿದ್ದ ಮದ್ಯ ಹಾಗೂ ಮುಡಬಿ ಬಳಿ ಎಂಟು ಬಾಕ್ಸ್‌ಗಳಲ್ಲಿ ಸಾಗಿಸುತ್ತಿದ್ದ ಮದ್ಯವನ್ನು ದಾಳಿ ನಡೆಸಿ ವಶಪಡಿಸಿಕೊಳ್ಳಲಾಗಿದೆ.