3 ಸಾವಿರ ಕೋಟಿ ಮೌಲ್ಯದ ಮಾದಕ ವಸ್ತು ವಶ

ನವದೆಹಲಿ, ಏ.19- ಅರಬ್ಬಿ ಸಮುದ್ರದಲ್ಲಿ ದೋಣಿಯ ಮೂಲಕ ಸಾಗಾಟಮಾಡುತಿದ್ದ 3000 ಕೋಟಿ ರೂಪಾಯಿಗೂ ಅಧಿಕ ಮಾದಕ ವಸ್ತುವನ್ನು ಭಾರತೀಯ ನೌಕಾ ಪಡೆ ವಶ ಪಡಿಸಿಕೊಂಡಿದೆ.

ಮೀನುಗಾರಿಕೆ ಮಾಡುತ್ತಿದ್ದ ದೋಣಿಯಲ್ಲಿ ಸಾಗಾಟಮಾಡುತಿದ್ದ 300 ಕೆಜಿ ಮಾದಕ ವಸ್ತುವನ್ನು ಭಾರತೀಯ ನೌಕಾಪಡೆ ಸಿಬ್ಬಂದಿಗಳು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಅರಬ್ಬಿ ಸಮುದ್ರದಲ್ಲಿ ಐಎನ್ಎಸ್ ಸುವರ್ಣ ಹಡಗು ಗಸ್ತು ತಿರುಗುತ್ತಿದ್ದ ವೇಳೆ ಮೀನುಗಾರಿಕೆ ದೋಣಿಯಲ್ಲಿ 3000 ಕೋಟಿ ರೂಪಾಯಿಗೂ ಅಧಿಕ ಸರಬರಾಜು ಮಾಡಲಾಗುತ್ತಿತ್ತು.ಅದನ್ನು ಪತ್ತೆ ಮಾಡಿ ವಶಪಡಿಸಿಕೊಳ್ಳಲಾಗಿದೆ.

ಮೀನುಗಾರಿಕೆಗೆ ಬಳಸುತ್ತಿದ್ದ ದೋಣಿಯಲ್ಲಿದ್ದ ಮಂದಿ ಅನುಮಾನಾಸ್ಪದವಾಗಿ ನಡೆದುಕೊಂಡ ಮೇರೆಗೆ ದೋಣಿಯನ್ನು ಅಡ್ಡಗಟ್ಟಿ ಪರಿಶೀಲನೆ ನಡೆಸಿದಾಗ ಮಾದಕವಸ್ತು ಇರುವುದು ಪತ್ತೆಯಾಗಿದೆ ಎಂದು ಭಾರತೀಯ ನೌಕಾಪಡೆಯ ಸಿಬ್ಬಂದಿಗಳು ತಿಳಿಸಿದ್ದಾರೆ.

ಕೇರಳದ ಕೋಚಿ ಬಂದರು ತನಕ ದೋಣಿಯನ್ನು ಬಿಗಿ ಭದ್ರತೆಯಲ್ಲಿ ಕರೆತರಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಭಾರತೀಯ ನೌಕಾ ಪಡೆಯ ಸಿಬ್ಬಂದಿ ತಿಳಿಸಿದ್ದಾರೆ.

ಭಾರತೀಯ ನೌಕಾಪಡೆ ಸಮುದ್ರದಲ್ಲಿ ವಶಪಡಿಸಿಕೊಂಡ ಅತ್ಯಂತ ದೊಡ್ಡ ಮತ್ತು ಮಾದಕ ವಸ್ತುಗಳ ಪ್ರಕರಣ ಇದಾಗಿದೆ ಎಂದು ತಿಳಿಸಿದೆ.

ಮಾದಕ ವಸ್ತುವನ್ನು ಎಲ್ಲಿಂದ ಎಲ್ಲಿಗೆ ಸಾಗಿಸಲಾಗುತ್ತಿತ್ತು ಇದು ಯಾರಿಗೆ ಸಂಬಂಧಪಟ್ಟಿದ್ದು ಎನ್ನುವ ಕುರಿತು ತನಿಖೆ ಮುಂದುವರೆದಿದೆ. ದೋಣಿಯಲ್ಲಿದ್ದ ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗುತ್ತದೆ ಭಾರತೀಯ ನೌಕಾಪಡೆ ತಿಳಿಸಿದೆ.

ಭಾರತದಿಂದ ಮಾಲ್ಡೀವ್ಸ್ ಅಥವಾ ಶ್ರೀಲಂಕಾಗೆ ಮಾದಕ ವಸ್ತುವನ್ನು ಸರಬರಾಜು ಮಾಡಲಾಗುತ್ತಿತ್ತು ಎನ್ನುವ ವಿಷಯವನ್ನು ಮೂಲಗಳು ಖಚಿತಪಡಿಸಿವೆ