3 ಮನೆಗಳ್ಳರ ಬಂಧನ 8 ಲಕ್ಷ ರೂ. ಚಿನ್ನಾಭರಣ ವಶ

ಬಳ್ಳಾರಿ: ನಗರದ ರಾಘವೇಂದ್ರ ಕಾಲೋನಿಯಲ್ಲಿನ ಮೂರು ಮನೆಗಳ ಬೀಗ ಮುರಿದು ಕಳ್ಳತನ ಮಾಡಿರುವ ಆರೋಪಿಗಳನ್ನು ಬಂಧಿಸಿರುವ ಗ್ರಾಮೀಣ ಠಾಣೆ ಪೊಲೀಸರು ಅವರಿಂದ 8 ಲಕ್ಷ ರೂ. ಮೌಲ್ಯದ 160 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಇಲ್ಲಿನ ತಾಳೂರು ರಸ್ತೆಯಲ್ಲಿ ವಾಹನ ತಪಾಸಣೆ ವೇಳೆ ಒಂದೇ ವಾಹನದಲ್ಲಿ ಆರೋಪಿಗಳು ಅನುಮಾನಾಸ್ಪದವಾಗಿ ಬರುತ್ತಿದ್ದಾಗ ವಶಕ್ಕೆ ಪಡೆದು ವಿಚಾರಿಸಿದಾಗ ರಾಘವೇಂದ್ರ ಕಾಲೋನಿಯಲ್ಲಿ ಮೂರು ಮನೆಗಳ ಬೀಗ ಮುರಿದು ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.
ನಗರದ ರಾಘವೇಂದ್ರ ಕಾಲೋನಿ ನಿವಾಸಿಯಾದ ಎಂ.ಮಂಜುನಾಥ್ ಅವರು ಕಳೆದ ಜನವರಿ 2 ರಂದು ಕುಟುಂಬ ಸಮೇತ ಮನೆಗೆ ಬೀಗ ಹಾಕಿ ತಂಗಿ ಮದುವೆ ನಿಮಿತ್ತ ಆಂಧ್ರದ ತಾಡಪತ್ರಿಗೆ ಹೋಗಿದ್ದರು. ಈ ವೇಳೆ ಮಂಜುನಾಥ್ ಮತ್ತವರ ತಮ್ಮ ಎಂ.ತ್ರಿನಾಥ್ ಇಬ್ಬರ ಮನೆಗಳ ಬೀಗವನ್ನು ಮುರಿದಿರುವ ಕಳ್ಳರು, ಅಣ್ಣ ಮಂಜುನಾಥ್ ಮನೆಯಲ್ಲಿ 36 ಸಾವಿರ ರೂ. ಮೌಲ್ಯದ 12 ಗ್ರಾಂ ತೂಕದ ಒಂದು ಜೊತೆ ಕಿವಿಯೋಲೆ, 54 ಸಾವಿರ ರೂ. ಮೌಲ್ಯದ 11 ಗ್ರಾಂ ತೂಕದ 2 ಜೊತೆ ಕಿವಿಯೋಲೆ, 51,200 ರೂ. ಮೌಲ್ಯದ 16 ಗ್ರಾಂ ತೂಕದ ಬ್ರಾಸ್‍ಲೇಟ್, 54 ಸಾವಿರ ರೂ. ಮೌಲ್ಯದ 18 ಗ್ರಾಂ ತೂಕದ ಚಿನ್ನದ ಚೈನ್, 28,800 ರೂ. ಮೌಲ್ಯದ 12 ಗ್ರಾಂ ತೂಕದ ಚಿನ್ನದ ಮುತ್ತಿನ ಹಾರ, 6 ಸಾವಿರ ರೂ. ಮೌಲ್ಯದ 12 ಗ್ರಾಂ ತೂಖದ ಹಳೆಯ ಮಾದರಿಯ ತಾಳಿಯ ಬಿಲ್ಲೆಗಳು, 62 ಸಾವಿರ ರೂ. ನಗದು ಹಣವನ್ನು ಕಳವು ಮಾಡಿದ್ದಾರೆ.
ನಂತರ ಮಂಜುನಾಥ್ ಸಹೋದರ ತ್ರಿನಾಥ್ ಅವರ ಮನೆಯಲ್ಲಿ ಅಲ್ಮೆರಾದ ಸೇಫ್ ಲಾಕರ್ ಬೀಗ ಮುರಿದ ಕಳ್ಳರು 45 ಸಾವಿರ ರೂ. ಮೌಲ್ಯದ 15 ಗ್ರಾಂ ತೂಕದ ಚಿನ್ನದ ಚೈನು, 38,400 ರೂ. ಮೌಲ್ಯದ 2 ಜೊತೆ ಕಿವಿಯೋಲೆ, 36 ಸಾವಿರ ರೂ. ಮೌಲ್ಯದ ಚಿನ್ನದ ಮುತ್ತಿನಹಾರ, 34 ಸಾವಿರ ರೂ. ಮೌಲ್ಯದ ಚಿನ್ನದ ಬ್ರಾಸ್‍ಲೈಟ್, 1,10 ಲಕ್ಷ ರೂ. ನಗದು ಹಣ ಸೇರಿ ಒಟ್ಟು 3,62,400 ರೂ. ಮೌಲ್ಯದ ಚಿನ್ನಾಭರಣ, 1,72 ಲಕ್ಷ ರೂ. ನಗದು ಹಣ ಕಳುವಾಗಿದ್ದು, ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಸಿಪಿಐ ಬಿ.ನಿರಂಜನ್, ಪಿಎಸ್‍ಐ ವೈ.ಎಸ್.ಹನುಮಂತಪ್ಪ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.