3 ನೇ ದಿನಕ್ಕೆ ಕಾಲಿಟ್ಟ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಅರುಣಕುಮಾರ ಪಾಟೀಲ್

ಅಫಜಲಪುರ:ಆ.24: ಕಬ್ಬು ಬೆಳೆಗಾರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಶಾಸಕರು ಹಾಗೂ ರೈತಪರ ಹೋರಾಟಗಾರರ ಸಮ್ಮುಖದಲ್ಲಿ ಸಕ್ಕರೆ ಕಾರ್ಖಾನೆಯ ಮಾಲೀಕರೊಂದಿಗೆ ಸಭೆ ನಡೆಸಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗುವುದು ಎಂದು ಕೆಪಿಸಿಸಿ ಸದಸ್ಯ ಅರುಣಕುಮಾರ ಎಂ.ವೈ. ಪಾಟೀಲ್ ತಿಳಿಸಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಕಬ್ಬು ಬೆಳೆಗಾರರ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದಿಂದ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಅವರು, ಪ್ರತಿ ಟನ್ ಕಬ್ಬಿಗೆ 3500 ರೂ. ರೈತರ ಬೆಂಬಲ ಬೆಲೆ ನಿಗದಿಪಡಿಸಬೇಕು. ಹಾಗೂ ರೇಣುಕಾ ಮತ್ತು ಕೆಪಿಆರ್ ಸಕ್ಕರೆ ಕಾರ್ಖಾನೆಗಳು ಸರ್ಕಾರ ನಿಗದಿಪಡಿಸಿದ್ದ ಎಫ್ ಆರ್ ಪಿ ದರದಲ್ಲಿ ಪ್ರತಿ ಟನ್ ಗೆ ಬಾಕಿ ಉಳಿಸಿಕೊಂಡ 162 ರೂ. ಹಣ ಕೂಡಲೇ ಪಾವತಿಸಬೇಕು ಎಂದು ಆಗ್ರಹಿಸಿದರು. ಅಲ್ಲದೆ ಪಟ್ಟಣದಲ್ಲಿ ಇತ್ತೀಚೆಗೆ ರಸ್ತೆ ಅಗಲೀಕರಣ ಸಂಬಂಧಿಸಿದಂತೆ ಗೂಡಂಗಡಿಗಳ ತೆರವು ಕಾರ್ಯಾಚರಣೆ ನಡೆಸಲಾಗಿದ್ದು ಅದರಲ್ಲಿ ಬೀದಿ ಬದಿಯ ವ್ಯಾಪಾರಸ್ಥರು ಹಾಗೂ ಗೂಡಂಗಡಿಗಳ ಮಾಲೀಕರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲು ಶಾಸಕರ ಗಮನಕ್ಕೆ ತಂದು ಕೂಡಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸ್ಥಳ ನಿರ್ಧರಿಸುವುದಾಗಿ ತಿಳಿಸಿದರು.

ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಜೆ.ಎಂ ಕೊರಬು ಮಾತನಾಡಿ, ಕಬ್ಬು ಬೆಳೆದ ರೈತರಿಗೆ ಕಾರ್ಖಾನೆಗಳಿಂದ ಸಿಗಬೇಕಾದ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು. ಇಲ್ಲಿವರೆಗೂ ನಿರಂತರವಾಗಿ ಕಬ್ಬು ಬೆಳೆಗಾರರಿಗೆ ಆಗಿರುವ ಅನ್ಯಾಯ ಇನ್ನು ಮುಂದೆ ಆಗದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಶಾಸಕರೊಂದಿಗೆ ಸಿ.ಎಂ ಹಾಗೂ ಡಿ.ಸಿ.ಎಂ ಅವರ ಬಳಿ ನಿಯೋಗ ತೆರಳುವುದಾಗಿ ತಿಳಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಮಂತ ಬಿರಾದಾರ ಮಾತನಾಡಿ, ಕಳೆದ ವರ್ಷ ಪ್ರಾಂತ ರೈತ ಸಂಘದಿಂದ ಧರಣಿ ಸತ್ಯಾಗ್ರಹ ಮಾಡಲಾಗಿತ್ತು. ಆಗ ಸರ್ಕಾರದ ಜನಪ್ರತಿನಿಧಿಗಳು ಭರವಸೆ ನೀಡಿದರು. ಆದರೆ ಇಲ್ಲಿವರೆಗೆ ಆ ಭರವಸೆಗಳು ಈಡೇರಿಸಿಲ್ಲ. ಹೀಗಾಗಿ ಸರ್ಕಾರ ಮಧ್ಯ ಪ್ರವೇಶಿಸಿ ಕಾರ್ಖಾನೆಗಳಿಂದ ರೈತರಿಗೆ ಬರಬೇಕಾದ ಬಾಕಿ ಹಣ ಕೊಡಿಸಬೇಕು.

ಕಾರ್ಖಾನೆ ಪ್ರಾರಂಭಕ್ಕಿಂತ ಮೊದಲು ರೈತರ ಜೊತೆಗೆ ದ್ವಿಪಕ್ಷೀಯ ಒಪ್ಪಂದ ಮಾಡಬೇಕು. ಬಹುತೇಕ ಕೆರೆಗಳಲ್ಲಿ ಹೂಳು ತುಂಬಿದ್ದು ನೀರಿನ ಸಂಗ್ರಹಮಟ್ಟ ಕುಸಿದಿರುವುದರಿಂದ ಹೂಳೆತ್ತುವ ಕೆಲಸ ನಡೆಸಬೇಕು. ಭೀಮಾ ಏತ ನೀರಾವರಿ ಯೋಜನೆಯಿಂದ ರೈತರಿಗೆ ಯಾವುದೇ ಪ್ರಯೋಜನವಾಗಿಲ್ಲ. ತಕ್ಷಣ ಕಾಲುವೆಗಳನ್ನು ಸ್ವಚ್ಛಗೊಳಿಸಿ ರೈತರ ಭೂಮಿಗೆ ನೀರು ಹರಿಸಬೇಕು. ಹೀಗಾಗಿ ನಮ್ಮ ಬೇಡಿಕೆಗಳು ಪೂರ್ಣಗೊಳ್ಳುವವರೆಗೆ ಸತ್ಯಾಗ್ರಹ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.

ಈ ಸಂದರ್ಭದಲ್ಲಿ ತಾಲೂಕು ಜಲಸಮಿತಿ ಒಕ್ಕೂಟದ ಅಧ್ಯಕ್ಷ ಸಿದ್ಧರಾಮ ದಣ್ಣೂರ, ಮೋಶಿನ್ ಪಟೇಲ್, ರಮೇಶ ಪೂಜಾರಿ, ಶರಣು ಕುಂಬಾರ, ರಾಜುಗೌಡ ಪಾಟೀಲ್, ಅಮೃತರಾವ್ ಪಾಟೀಲ್, ಶಾಂತಾ ಘಂಟೆ, ಮಹೇಶ ಆಲೇಗಾಂವ, ಮಾಜೀದ ಪಟೇಲ್, ಮನೋಹರ ರಾಠೋಡ, ಶಂಕ್ರೆಪ್ಪ ಮಣ್ಣೂರ, ಗುರು ಚಾಂದಕವಟೆ, ಸಿದ್ದಣ್ಣಗೌಡ ಪಾಟೀಲ್ ಅನೇಕರಿದ್ದರು.