3 ನೇ ಅಲೆಯಿಂದ ಮಕ್ಕಳ ರಕ್ಷಣೆಗೆ ಸೂಕ್ತ ಸಿದ್ಧತೆಗೆ ಸೂಚನೆ

ಗದಗ ಜೂ.11: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಸಂಭವನೀಯ 3 ನೇ ಅಲೆ ಎದುರಾದಲ್ಲಿ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಅವಶ್ಯಕ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಅವರು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು.
ಗದಗ ಜಿ.ಪಂ. ಸಭಾಂಗಣದಲ್ಲಿ ಏರ್ಪಡಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಹಾಗೂ ಕೊರೋನಾ ಸಂಭಾವ್ಯ 3 ನೇ ಅಲೆಯಿಂದ ಮಕ್ಕಳ ರಕ್ಷಣೆ ಹಾಗೂ ಆರೈಕೆಗೆ ಕೈಗೊಳ್ಳಬೇಕಾದ ಮುಂಜಾಗರೂಕತಾ ಕ್ರಮಗಳ ಸಭೆಯ ಅಧ್ಯಕ್ಷತೆ ವಹಿಸಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿದರು.
ಕೋವಿಡ್ ಸೋಂಕಿನ 3ನೇ ಅಲೆಯಿಂದ ಅಧಿಕ ಮಕ್ಕಳು ಕೋವಿಡ್ ಸೋಂಕಿಗೆ ಒಳಗಾಗುವ ಸಾಧ್ಯತೆ ಇದ್ದು ಜಿಲ್ಲಾ ಆಸ್ಪತ್ರೆ, ತಾಲೂಕಾ ಆಸ್ಪತ್ರೆ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಸೂಕ್ತ ಹಾಸಿಗೆಗಳ ವ್ಯವಸ್ಥೆ ಮಾಡಬೇಕು. ಜೊತೆಗೆ ಆಕ್ಸಿಜನ್ ವೆಂಟಿಲೇಟರ್ ಒಳಗೊಂಡಂತೆ ಸಕಲ ಸಿದ್ಧತೆ ಮಾಡಿಕೊಳ್ಳುವುದರ ಜೊತೆಗೆ ಯೋಜನೆ ರೂಪಿಸಿಟ್ಟುಕೊಳ್ಳೂವಂತೆ ಸೂಚಿಸಿದರು.
ಕೊರೋನಾ ಸೋಂಕು ಹೆಚ್ಚಾಗಿ ಅಪೌಷ್ಟಿಕ, ಅಸ್ತಮಾ ಹಾಗೂ ಹೃದ್ರೋಗವಿರುವ ಮಕ್ಕಳಿಗೆ ತಗಲುವ ಸಾಧ್ಯತೆ ಅಧಿಕವಾಗಿದ್ದು ಜಿಲ್ಲೆಯಲ್ಲಿನ ಅಪೌಷ್ಟಿಕ ಮಕ್ಕಳಿಗೆ ಉತ್ತಮ ಆಹಾರ ನೀಡುವ ಮೂಲಕ ಅಪೌಷ್ಟಿಕತೆ ಹೋಗಲಾಡಿಸಲು ಸೂಕ್ತ ಕ್ರಮ ವಹಿಸಬೇಕು. ಅಲ್ಲದೇ ಅಸ್ತಮಾ ಹಾಗೂ ಹೃದಯ ಸಂಬಂಧಿ ಕಾಯಿಲೆಯಿರುವ ಮಕ್ಕಳ ಮೇಲೆ ಇಲಾಖಾಧಿಕಾರಿಗಳು ನಿಗಾ ವಹಿಸಬೆಕೆಂದು ಸಚಿವ ಶಶಿಕಲಾ ಜೊಲ್ಲೆ ತಿಳಿಸಿದರು.
ಶಾಸಕ ಡಾ.ಎಚ್.ಕೆ.ಪಾಟೀಲ ಮಾತನಾಡಿ ಮಕ್ಕಳಿಗೆ ತಗಲುವ ಸೋಂಕಿನ ಚಿಕಿತ್ಸೆ ವಿಷಯದಲ್ಲಿ ನಿಷ್ಕಾಳಜಿ ಬೇಡ. ವ್ಯವಸ್ಥಿತವಾಗಿ ಸೂಕ್ತ ಚಿಕಿತ್ಸೆ ಒದಗಿಸಬೇಕು. ಜೊತೆಗೆ ಸೋಂಕು ದೃಡಪಟ್ಟ ಮಕ್ಕಳ ಮಾಹಿತಿಯನ್ನು ವಿಧಾನಸಭಾ ಕ್ಷೇತ್ರವಾರು ವಿಂಗಡಿಸಿ ನೀಡಬೇಕು. ಆರೋಗ್ಯ ಇಲಾಖಾಧಿಕಾರಿಗಳು ನೀಡುವ ಅಂಕಿ ಅಂಶಗಳು ಒಂದಕ್ಕೊಂದು ತಾಳೆಯಾಗಬೇಕು ಹಾಗೂ ನಿಖರವಾಗಿರಬೇಕು. ಶೀಘ್ರವೇ ಮಕ್ಕಳಿಗೆ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಪ್ರತ್ಯೇಕ ವಾರ್ಡ ವ್ಯವಸ್ಥೆ ಮಾಡಿಕೊಳ್ಳಬೇಕು. ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಅಗತ್ಯವಿರುವ ಬೆಡ್ ಹಾಗೂ ವೆಂಟಿಲೇಟರ್‍ಗಳ ಸಿದ್ಧತೆ ಮಾಡಿಕೊಳ್ಳಬೇಕು. ಸೋಂಕಿನಿಂದ ಮಕ್ಕಳ ಜೀವ ಹಾನಿಯಾಗದಂತೆ ಸೂಕ್ತ ಚಿಕಿತ್ಸೆ ಕಲ್ಪಿಸಬೇಕೆಂದರು.
ವಿಧಾನಪರಿಷತ್ ಸದಸ್ಯ ಎಸ್.ವಿ ಸಂಕನೂರ ಮಾತನಾಡಿ ಜಿಲ್ಲೆಯಲ್ಲಿ ಮಕ್ಕಳ ಸಂಖ್ಯೆಗನುಸಾರವಾಗಿ ಮಕ್ಕಳ ತಜ್ಞರು ಇರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ನಮಗಿರುವ ಮಾಹಿತಿಗನುಸಾರ ಮಕ್ಕಳ ತಜ್ಞರ ಕೊರತೆಯಿದ್ದು ಕೊರತೆ ನೀಗಿಸಲು ಸಚಿವರು ಮುಂದಾಗಬೇಕು. ಖಾಯಂ ನೇಮಕಾತಿ ಸಾಧ್ಯವಾಗದಿದ್ದಲ್ಲಿ ಗುತ್ತಿಗೆ ಆಧಾರದ ಮೂಲಕ ಮಕ್ಕಳ ತಜ್ಞರನ್ನು ಜಿಲ್ಲೆಗೆ ನೀಡಬೇಕೆಂದು ಹೇಳಿದರು.
ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್ ಮಾತನಾಡಿ ಸಂಭವನೀಯ ಕೋವಿಡ್ 3 ನೇ ಅಲೆ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು ಅಗತ್ಯದ ಎಲ್ಲ ಕ್ರಮಗಳನ್ನು ವಹಿಸಲಾಗಿದೆ. ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳೊಂದಿಗೆ ಶೀಘ್ರವೇ ಸಭೆ ನಡೆಸಿ ಸೂಕ್ತ ಯೋಜನೆ ರೂಪಿಸಿ ಚಿಕಿತ್ಸೆ ಒದಗಿಸಲು ಕ್ರಮ ವಹಿಸಲಾಗುವುದು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆಯ ಉಪನಿರ್ದೇಶಕ ಉಸ್ಮಾನ್ ಎ ಮಾತನಾಡಿ ಸಂಭಾವ್ಯ ಕೊರೋನಾ 3 ನೇ ಅಲೆ ಎದುರಾದಲ್ಲಿ ಮಕ್ಕಳನ್ನು ಕ್ವಾರಂಟೈನ್ ಮಾಡಲು ಜಿಲ್ಲೆಯಲ್ಲಿ 6 ಕ್ವಾರಂಟೈನ್ ಕೇಂದ್ರಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಬಾಲಕರಿಗೆ , ಬಾಲಕಿಯರಿಗೆ 0-6 ವರ್ಷದ ಮಕ್ಕಳಿಗೆ ಸಾಮಾನ್ಯ ಪಾಲನೆ ಪೆÇೀಷಣೆ ಅವಶ್ಯಕವಿರುವ ಮಕ್ಕಳಿಗೆ ಹಾಗೂ ವಿಶೇಷ ಚೇತನ ಮಕ್ಕಳಿಗೆ ಪ್ರತ್ಯೇಕವಾಗಿ ಗುರುತಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಇಬ್ಬರೂ ಪಾಲಕರು ಮರಣ ಹೊಂದಿದವರ ಸಂಖ್ಯೆ 2 ಹಾಗೂ ಏಕಪೆÇೀಷಕ ಮರಣ ಹೊಂದಿದವರ ಮಕ್ಕಳ ಸಂಖ್ಯೆ 6 ಇದೆ. ಈ ಆರು ಮಕ್ಕಳಿಗೆ ಪ್ರಾಯೋಜಕತ್ವ ಯೋಜನೆಯಡಿ ಅನುದಾನ ಮಂಜೂರಾತಿ ಪಡೆಯಲಾಗಿದೆ ಎಂದರು.
ಜಿಲ್ಲೆಯಲ್ಲಿ 1123 ಅಂಗನವಾಡಿ ಕಾರ್ಯಕರ್ತೆಯರಿದ್ದು 1089 ಜನರು ಕೋವಿಡ್ ಲಸಿಕೆ ಪಡೆದಿದ್ದಾರೆ. 1041 ಅಂಗನವಾಡಿ ಸಹಾಯಕಿಯರಿದ್ದು ಇದರಲ್ಲಿ 1017 ಜನರು ಕೋವಿಡ್ ಲಸಿಕೆ ಪಡೆದಿದ್ದಾರೆ. ಜೊತೆಗೆ 18 ವರ್ಷ ಮೇಲ್ಪಟ್ಟ 12653 ವಿಕಲಚೇತನರಿದ್ದು ಇದರಲ್ಲಿ 3546 ಮೊದಲನೇ ಹಾಗೂ 506 ಎರಡನೇ ಡೋಸ್ ಲಸಿಕೆ ಪಡೆದಿರುತ್ತಾರೆ. ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳಲ್ಲಿರುವ 137 ನಿವಾಸಿಗಳ ಪೈಕಿ 102 ಜನರು ಲಸಿಕೆ ಪಡೆದಿರುತ್ತಾರೆ ಎಂದು ಉಸ್ಮಾನ್ ಎ ಅವರು ಮಾಹಿತಿ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ ಬಸರಿಗಿಡದ ಮಾತನಾಡಿ ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ವಿಭಾಗಗಳನ್ನು ಗುರುತಿಸಲಾಗಿದೆ. ಜಿಮ್ಸ್ ಆಸ್ಪತ್ರೆಯಲ್ಲಿ 33, ಮುಂಡರಗಿ , ನರಗುಂದ, ರೋಣ ತಾಲೂಕಾ ಆಸ್ಪತ್ರೆಗಳಲ್ಲಿ ತಲಾ 10. ಶಿರಹಟ್ಟಿಯಲ್ಲಿ 5 ಸೇರಿದಂತೆ ಒಟ್ಟು 68 ಹಾಸಿಗೆಗಳನ್ನು 0-18 ವಯಸ್ಸಿನ ಮಕ್ಕಳಿಗೆ ಮೀಸಲಿರಿಸಲಾಗಿದೆ. ಜಿಮ್ಸ್ನಲ್ಲಿ ಹೆಚ್ಚುವರಿಯಾಗಿ 100 ಬೆಡ್ ಗಳನ್ನು ಮೀಸಲಿಡಲು ಯೋಜನೆ ರೂಪಿಸಲಾಗಿದೆ.
ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ಜಗದೀಶ ನುಚ್ಚಿನ ಮಾತನಾಡಿ 2020 ರಲ್ಲಿ 0-18 ವಯಸ್ಸಿನ 28,100 ಮಕ್ಕಳ ಗಂಟಲು ದ್ರವ ಮಾದರಿ ಶೇಖರಿಸಿ ಪರೀಕ್ಷೆಗೊಳಪಡಿಸಲಾಗಿದ್ದು 981 ಮಕ್ಕಳು ಸೋಂಕು ದೃಢಪಟ್ಟಿತ್ತು. 2021 ರಲ್ಲಿ 51,279 ಮಕ್ಕಳ ಗಂಟಲು ದ್ರವ ಮಾದರಿ ಪರೀಕ್ಷೆಗೊಳಪಡಿಸಲಾಗಿತ್ತು. ಆ ಪೈಕಿ 1381 ಮಕ್ಕಳಿಗೆ ಸೋಂಕು ದೃಢಪಟ್ಟಿದ್ದು ಎಲ್ಲರೂ ಗುಣಮುಖರಾಗಿದ್ದಾರೆ. ಈ ಪೈಕಿ ಪ್ರಸುತ 89 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಸೋಂಕಿಗೆ ಜಿಲ್ಲೆಯಲ್ಲಿ ಯಾವುದೇ ಮಗು ಮರಣ ಹೊಂದಿರುವುದಿಲ್ಲ ಎಂದು ಮಾಹಿತಿ ಒದಗಿಸಿದರು.
ಸಭೆಯಲ್ಲಿ ಶಾಸಕ ರಾಮಣ್ಣ ಲಮಾಣಿ, ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಕಾಂತಿಲಾಲ ಬನ್ಸಾಲಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಮಂಜುನಾಥ ಬಮ್ಮನಕಟ್ಟಿ, ಜಿಲ್ಲಾ ಪೆÇಲೀಸ ವರಿಷ್ಟಾಧಿಕಾರಿ ಯತೀಶ್ ಎನ್, ಅಪರ ಜಿಲ್ಲಾಧಿಕಾರಿ ಸತೀಶಕುಮಾರ್ ಎಂ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಆರ್.ಸಿ.ಎಚ್. ಅಧಿಕಾರಿ ಡಾ.ಬಿ.ಎಂ. ಗೊಜನೂರ, ಮಕ್ಕಳ ರಕ್ಷಣಾಧಿಕಾರಿ ಅವಿನಾಶ ಗೊಟಖಿಂಡಿ ಸೇರಿದಂತೆ ತಾಲೂಕಾ ಶಿಶು ಅಭಿವೃದ್ಧಿ ಯೋಜನಾದಿಕಾರಿಗಳು, ತಾಲೂಕಾ ವೈದ್ಯಾಧಿಕಾರಿಗಳು , ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.