3 ದಿನ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಿ

ಕೆ.ಆರ್.ಪುರ, ಜು.೨೬- ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷಗಳಾದ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಪ್ರತಿಮನೆಗಳಲ್ಲಿ ನಮ್ಮ ರಾಷ್ಟ್ರದ ತ್ರಿವರ್ಣ ಧ್ವಜ’ ಹಾರಿಸಬೇಕೆಂದು ಶಾಸಕ ಅರವಿಂದ ಲಿಂಬಾವಳಿ ಅವರು ಕರೆನೀಡಿದರು.
ಮಹದೇವಪುರ ಕ್ಷೇತ್ರದ ಹೂಡಿ ಸಮೀಪ ಖಾಸಗಿ ಹೊಟೇಲ್‌ನಲ್ಲಿ ಹೂಡಿ, ಬೆಳತೂರು, ಕಾಡುಗೋಡಿ ಹೊಸವಾರ್ಡ್‌ಗಳ ಬೂತ್ ಅಧ್ಯಕ್ಷರು, ಬಿಎಲ್‌ಎ ೨, ಬೂತ್ ಉಸ್ತುವಾರಿ, ಘಟನಾಯಕರ ಸಭೆಯಲ್ಲಿ ಭಾಗವಹಿಸಿ ೬೦೦ಕ್ಕೂ ಹೆಚ್ಚು ರಾಷ್ಟ್ರಧ್ವಜ ವಿತರಿಸಿ ಅವರು ಮಾತನಾಡಿದರು.
’ಪ್ರತಿಮನೆಗಳಲ್ಲಿ ತ್ರಿವರ್ಣ ಧ್ವಜ’ ಹಾರಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಅಭಿಯಾನಕ್ಕೆ ಕರೆನೀಡಿದ್ದು, ಇಂದಿನ ಸಭೆಯಲ್ಲಿ ೬೦೦ಕ್ಕೂ ಅಧಿಕ ಕಾರ್ಯಕರ್ತರಿಗೆ ರಾಷ್ಟ್ರಧ್ವಜವನ್ನು ಹಸ್ತಾಂತರಿಸುವ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು ಎಂದರು.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷಗಳಾಗಿದ್ದು, ಬರುವ ಆಗಸ್ಟ್ ೧೩, ೧೪ ಮತ್ತು ೧೫ ರಂದು ಕಾರ್ಯಕರ್ತರು, ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಬೇಕೆಂದು ತಿಳಿಸಿದರು.
ಪಕ್ಷದ ಸಂಘಟನೆ ಮತ್ತು ಕಾರ್ಯಕ್ರಮಗಳನ್ನು ಕಾರ್ಯಕರ್ತರೆಲ್ಲರೂ ಒಟ್ಟಾಗಿ ಜೊತೆಗೂಡಿ ಮಾಡಿದರೆ ಸೂಕ್ತ ಪ್ರತಿಫಲ ಸಿಗುತ್ತದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ಬಿ. ಎನ್. ನಟರಾಜ್, ಹೂಡಿ ಹೆಚ್.ಎಸ್. ಪಿಳ್ಳಪ್ಪ, ಹೆಚ್.ವಿ.ಮಂಜುನಾಥ್, ಬಿಳೆಶಿವಾಲೆ ಆನಂದ್, ರಾಜೇಶ್, ಮತ್ತಿತರರು ಇದ್ದರು.