3 ದಿನ ಗಣೇಶೋತ್ಸವಕ್ಕೆ ಷರತ್ತು ಬದ್ಧ ಅನುಮತಿ

ಬೆಂಗಳೂರು,ಸೆ.೫- ರಾಜ್ಯದಲ್ಲಿ ಸಾರ್ವಜನಿಕವಾಗಿ ಗಣೇಶೋತ್ಸವವನ್ನು ಆಚರಿಸಲು ರಾಜ್ಯಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ, ಸಾರ್ವಜನಿಕವಾಗಿ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಬಂಧ ಹೇರಲಾಗಿದ್ದು, ಸರಳ ಹಾಗೂ ಸಾಂಪ್ರದಾಯಿಕವಾಗಿ ಗಣೇಶೋತ್ಸವ ಆಚರಣೆಗೆ ಸರ್ಕಾರ ಒಪ್ಪಿಗೆ ನೀಡಿದೆ.

ನಗರದ ಆರ್.ವಿ ರಸ್ತೆಯಲ್ಲಿ ಗೌರಿ-ಗಣೇಶ ಮೂರ್ತಿಗಳನ್ನು ಮಾರಾಟಕ್ಕೆ ಇಡಲಾಗಿದ್ದು ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸುತ್ತಿರುವುದು.


ರಾಜ್ಯದಲ್ಲಿ ೩ ದಿನ ಮಾತ್ರ ಗಣೇಶೋತ್ಸವ ಆಚರಣೆಗೆ ಅವಕಾಶ ದೊರೆತಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ನಡೆದ ಸಚಿವರು ಹಾಗೂ ತಜ್ಞರ ಸಭೆಯಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಷರತ್ತುಬದ್ಧ ಅನುಮತಿ ನೀಡುವ ತೀರ್ಮಾನ ಕೈಗೊಳ್ಳಲಾಯಿತು.
ಸಾರ್ವಜನಿಕ ಗಣೇಶೋತ್ಸವವನ್ನು ಸರಳವಾಗಿ ಆಚರಿಸಬೇಕು. ಅದ್ಧೂರಿ ಆಚರಣೆಗೆ ಅವಕಾಶವಿಲ್ಲ, ಯಾವುದೇ ಸಾಂಸ್ಕೃತಿಕ
ಹಾಗೂ ಯಾವುದೇ ರೀತಿಯ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ, ಹೆಚ್ಚು ಗದ್ದಲಕ್ಕೆ ಅವಕಾಶವಿಲ್ಲದಂತೆ ಸರಳ ಹಾಗೂ ಸಾಂಪ್ರದಾಯಿಕವಾಗಿ ಗಣೇಶ ಪೂಜೆಗೆ ಮಾತ್ರ ಅವಕಾಶ ನೀಡುವ ಷರತ್ತುಗಳನ್ನೂ ವಿಧಿಸಲು ತೀರ್ಮಾನ ಮಾಡಲಾಗಿದೆ
ಗಣೇಶ ಮೂರ್ತಿಯ ವಿಸರ್ಜನೆ ಸಂದರ್ಭದಲ್ಲೂ ಮೆರವಣಿಗೆ, ಉತ್ಸವ ಮಾಡುವುದಕ್ಕೂ ನಿರ್ಬಂಧ ವಿಧಿಸುವ ಜತೆಗೆ ಹೆಚ್ಚು ಜನ ಸೇರದಂತೆ ನೋಡಿಕೊಳ್ಳಬೇಕು. ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.
ದೇವಸ್ಥಾನಗಳಲ್ಲೂ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಅವಕಾಶವಿದ್ದು, ಇಲ್ಲೂ ಕೊರೊನಾ ನಿಯಮಗಳ ಕಟ್ಟುನಿಟ್ಟಿನ ಪಾಲನೆಗೂ ಸೂಚನೆ ನೀಡಲಾಗಿದೆ. ಗಣೇಶನ ದರ್ಶನಕ್ಕೆ ಬರುವ ಭಕ್ತರು ಮಾಸ್ಕ್ ಕಡ್ಡಾಯ ಹಾಗೆಯೇ ಥರ್ಮಲ್ ಸ್ಕ್ರೀನಿಂಗ್ ಮತ್ತು ಸ್ಯಾನಿಟೈಸ್ ಕಡ್ಡಾಯ ಮಾಡಲಾಗಿದೆ.

ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ.

೩ ದಿನ ಮಾತ್ರ ಗಣೇಶೋತ್ಸವಕ್ಕೆ ಅವಕಾಶ.

ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮಗಳಿಗೆ ನಿರ್ಬಂಧ,

ಗಣೇಶಮೂರ್ತಿ ಪೂಜೆಗೆ ಮಾತ್ರ ಅವಕಾಶ.

ವಿಸರ್ಜನೆ ಸಂದರ್ಭದಲ್ಲಿ ಮೆರವಣಿಗೆಗೆ ನಿಷೇಧ