
ಸಂಜೆವಾಣಿ ವಾರ್ತೆಹೊಸಪೇಟೆ ಆ.10: ಹೊಸಪೇಟೆ ತಾಲ್ಲೂಕಿನಲ್ಲಿ ಮಳೆಯಿಂದ ಸೋರುತ್ತಿರುವ ಮತ್ತು ಸಂಪೂರ್ಣ ದುರಸ್ತಿಗೆ ಒಳಗಾಗಿರುವ ಒಟ್ಟು 641 ಕೊಠಡಿಗಳನ್ನು 3 ತಿಂಗಳಲ್ಲಿ ರಿಪೇರಿ ಮಾಡಿಸಬೇಕೆಂದು ಜಿಲ್ಲಾಧಿಕಾರಿಯವರಿಗೆ ವಸತಿ, ಹಜ್ ಮತ್ತು ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್.ಜಮೀರ್ ಅಹ್ಮದ್ ಖಾನ್ ಅವರು ಸೂಚಿಸಿದರು.ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆ ತಾಲ್ಲೂಕಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ತಾಲ್ಲೂಕುವಾರು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ, ಶಾಲೆಯಲ್ಲಿ ಇರಬೇಕಾದ ಆಸನ, ಶೌಚಾಲಯ, ಕುಡಿಯುವ ನೀರು, ಕಾಂಪೌಂಡ್ ಸೇರಿದಂತೆ ಎಲ್ಲ ಸೌಕರ್ಯ ನೀಡಿ ಶೈಕ್ಷಣಿಕ ಪ್ರಗತಿಯನ್ನು ದಾಖಲಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚನೆ ನೀಡಿದರು.ಕಾರ್ಮಿಕರ ಯೋಜನೆಗಳ ಜಾಗೃತಿಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 25 ಸಾವಿರ ಕೋಟಿ ಅನುದಾನ ಇದ್ದು, ಕಾರ್ಮಿಕರ ಕಲ್ಯಾಣಕ್ಕಾಗಿ ಹಲವು ಯೊಜನೆಗಳು ಜಾರಿಯಲ್ಲಿವೆ. ಜೊತೆಗೆ ಕಾರ್ಮಿಕರಿಗಾಗಿ ವಸತಿ ಇಲಾಖೆಗೆ ಮಂಡಳಿಯಿಂದ 400 ಕೋಟಿ ಅನುದಾನವನ್ನು ಪಡೆದಿದ್ದೇನೆ. ಇಲಾಖೆಯವರು ಕಾರ್ಮಿಕರಿಗೆ ಸಿಗುವ ಸೌಲಭ್ಯಗಳ ಮಾಹಿತಿಯನ್ನು ಇಲ್ಲಿನ ಕಾರ್ಮಿಕರಿಗೆ ಜಾಗೃತಿ ಮೂಡಿಸಬೇಕು. ಇದರ ಜೊತೆಗೆ ಕಾರ್ಮಿಕರಿಗೆ ನೀಡುವ ಗುರುತಿನ ಚೀಟಿ, ಕಾರ್ಮಿಕರ ಮಕ್ಕಳಿಗೆ ಒದಗಿಸಲಾಗುವ ಶಿಕ್ಷಣ ಇತರ ಯೋಜನೆಗಳ ಕುರಿತು ಕಾರ್ಮಿಕರಲ್ಲಿ ಜಾಗೃತಿ ಮೂಡಿಸಬೇಕು. ಕೈಗಾರಿಕಾ ಪ್ರದೇಶಗಳಿಗೆ ತೆರಳಿ ಕಾರ್ಮಿಕರ ವೇತನ ಪಾವತಿ, ಇತರ ಸೌಲಭ್ಯಗಳ ಲಭ್ಯತೆ ಕುರಿತು ನಿಯಮಿತ ಮಾಹಿತಿ ಪಡೆದು ವರದಿ ಸಲ್ಲಿಸುವ ಜೊತೆಗೆ ಬಾಲಕಾರ್ಮಿಕ ಪದ್ದತಿ ನಡೆಯತ್ತಿದ್ದಲ್ಲಿ ಎಚ್ಚರವಹಿಸಬೇಕು ಎಂದು ಸೂಚಿಸಿದರು.ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಚಾಲನೆಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಹೊಸಪೇಟೆ-ಬಳ್ಳಾರಿ ಮಾರ್ಗದ ರಸ್ತೆಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಇದುವರೆಗೂ ಪೂರ್ಣಗೊಳ್ಳದ ಕಾರಣ ಸಮಸ್ಯೆಯಾಗಿದೆ. ಹೊಸ ಟೆಂಡರ್ ಅನುಮೊದನೆ ಆಗಿದೆ. ಕಾಮಗಾರಿ ಆರಂಭಿಸಿದ್ದಾರೆ ಎಂದು ಮಾಹಿತಿ ನೀಡಿದರು. ಈ ವೇಳೆ ಸಚಿವರು ಹೊಸಪೇಟೆಗೆ ಸಂಪರ್ಕಿಸುವ ರಸ್ತೆಗಳಲ್ಲಿ ಹೆಚ್ಚು ಗುಂಡಿಗಳಿದ್ದು, ಅವನ್ನು ಮುಚ್ಚಲು ತಿಳಿಸಿ, ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ರಸ್ತೆಯಲ್ಲಿ ಟನಲ್‍ನಿಂದ ಮರಿಯಮ್ಮಹಳ್ಳಿವರೆಗೂ ಸೇವಾರಸ್ತೆ ನಿರ್ಮಾಣ ಆಗದ ಕಾರಣ ಅಪಘಾತ ಹೆಚ್ಚಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚಿಸುವ ಕುರಿತು ಸೂಚನೆ ನೀಡಿದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆತಾಲೂಕಿನಲ್ಲಿ ಕೇವಲ 2 ಗಣಿ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ವಾರ್ಷಿಕ 3 ಲಕ್ಷ ಮೆ.ಟನ್ ಅದಿರು ಉತ್ಪಾದಿಸುತ್ತಿವೆ ಇನ್ನೂ 11 ಕಂಪನಿಗಳು ವಿವಿಧ ಕಾರಣಗಳಿಂದ ಆರಂಭಗೊಂಡಿಲ್ಲ, ಇವುಗಳು ಕಾರ್ಯಗೊಂಡಾಗ ರಾಜಧನ ಹೆಚ್ಚು ಸಂಗ್ರಹವಾಗಲಿದೆ. ಇದರಿಂದ ಅಭಿವೃದ್ಧಿಗೂ ಹೆಚ್ಚು ಅನುದಾನ ಸಿಗಲಿದೆ ಎಂಬ ಮಾಹಿತಿ ಪಡೆದುಕೊಂಡರು. ಜಿಲ್ಲೆಯಲ್ಲಿರುವ 11 ಮರಳು ಬ್ಲಾಕ್‍ಗಳನ್ನೂ ಕಾರ್ಯಗತಗೊಳಿಸಿದರೆ ಇತರ ಜಿಲ್ಲೆಗಳಿಂದ ಸಾಗಿಸುವ ಅಕ್ರಮ ಮರಳಿನ ನಿಯಂತ್ರಣ ಜೊತೆಗೆ ರಾಜಧನ ಸಂಗ್ರಹವಾಗುತ್ತದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಏತ ನೀರಾವರಿ ಯೋಜನೆ: ತಾಲ್ಲೂಕಿನ ಪಾಪಿನಾಯಕನಹಳ್ಳಿ ಭಾಗದ 22 ಗ್ರಾಮದ ಕೆರೆಗಳಿಗೆ ನೀರು ಒದಗಿಸುವ ಯೋಜನೆಗೆ ಸಂಬಂಧಿಸಂತೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಗಡುವು ನೀಡಿದ ನಂತರವೂ ಯೋಜನೆ ಅಪೂರ್ಣವಾಗಿದ್ದು, ಈ ಬಗ್ಗೆ ವರದಿಯನ್ನು ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದರು.ವಿಜಯನಗರ ಕಾಲದ ಕಾಲುವೆಗಳ ನಿರ್ವಹಣೆ:ವಿಜಯನಗರ ಕಾಲಘಟ್ಟದ ಕಾಲುವೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ನೀರಾವರಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಮಾಹಿತಿ ಪಡೆದುಕೊಂಡರು. ಕಾಲುವೆಗಳಿಗೆ ಬಳಕೆ ನೀರು, ಯುಜಿಡಿ ನೀರು ಸೇರುತ್ತಿದ್ದು, ರೈತರ ಹೊಲಗಳಿಗೆ ತಲುಪುವ ಕಾಲುವೆ ನೀರಿನ ಅವ್ಯವಸ್ಥೆ ಸರಿಪಡಿಸಲು ಸೂಚಿಸಿದರು.ಜಿಲ್ಲಾಧಿಕಾರಿ ದಿವಾಕರ ಎಂ.ಎಸ್., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್., ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲನ್, ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಹಂಪಿ ವಿಶ್ವಪಾರಂಪರಿಕಾ ಪ್ರದೇಶ ನಿರ್ವಹಣಾ ಸಮಿತಿ(ಹವಾಮಾ) ಆಯುಕ್ತ ಮಾರುತಿ ಎಂ.ಪಿ., ಉಪವಿಭಾಗಾಧಿಕಾರಿ ಮೊಹಮ್ಮದ್ ಅಲಿ ಅಕ್ರಂ ಶಾ, ನಗರಸಭೆ ಉಪಾಧ್ಯಕ್ಷ ರೂಪೇಶ್ ಕುಮಾರ್ ಸಭೆಯಲ್ಲಿ ಹಾಜರಿದ್ದರು.