ಕೋಲಾರ, ಮೇ ೨೯- ಟೊಮೆಟೋಗೆ ಬೆಲೆ ಇಲ್ಲದೇ ಮುಳಬಾಗಿಲು ತಾಲೂಕಿನ ಸಿದ್ದಘಟ್ಟದಲ್ಲಿ ೩ ಎಕರೆಗಿಂತ ಹೆಚ್ಚಿನ ಪ್ರದೇಶದಲ್ಲಿ ಉತ್ತಮ ಫಸಲು ಬಂದಿದ್ದರೂ ಕೀಳದೆ ಹಣ್ಣುಗಳು ಗಿಡದಲ್ಲೇ ಬಿಟ್ಟು ಕೊಳೆತು ನೆಲಕ್ಕೆ ಉದಿರುತ್ತಿರುವುದು ಕಂಡುಬಂದಿದೆ.
ಟೊಮೆಟೋ ಫಸಲು ಬೆಳೆಯಲು ಸುಮಾರು ೬ ಲಕ್ಷಕ್ಕಿಂತ ಹೆಚ್ಚಿನ ಖರ್ಚು ಆಗಿರುವ ಬಗ್ಗೆ ನತಾದೃಷ್ಟ ರೈತ ಇ.ಕೃಷ್ಣಪ್ಪ ನಮ್ಮ ಕಷ್ಟವನ್ನು ಯಾರಿಗೆ ಹೇಳಿಕೊಳ್ಳುವುದು ಎಂದು ಕಣ್ಣೀರು ಇಟ್ಟಿದ್ದಾರೆ.ಜಿಲ್ಲೆಯಲ್ಲಿ ಹೆಚ್ಚು ರೈತರು ಟೊಮೆಟೋಗೆ ಉತ್ತಮ ಬೆಲೆ ಸಿಗಬಹುದು ಎಂದು ಹೆಚ್ಚು ಭೂಮಿ ಟೊಮೆಟೋ ಬೆಳೆಗೆ ಮೀಸಲಿಡುತ್ತಾರೆ ಭೂಮಿಯನ್ನು ಹದಮಾಡಿ ಕಳೆ ಬರದಂತೆ ಔಷದಿ ಸಿಂಪಡಿಸಿ ಫಲವತ್ತಾಗುವಂತೆ ಕೋಳಿಗೊಬ್ಬರ ಬೇರೆ ರಾಜ್ಯಗಳಿಂದ ತರಸಿ ಮಾಡಿರುತ್ತಾರೆ ಕಳೆ ಬರದಿರಲು ನೆಲಕ್ಕೆ ಪೇಪರ್ ಹಾಕಿದ್ದಾರೆ.
ನರ್ಸರಿಯಿಂದ ಸಸಿ ತರಸಿ ನೆಟ್ಟು ಅದಕ್ಕೆ ಯುಪ್ಲಿಸ್ ಕಡ್ಡಿಗಳನ್ನ ನಾಟಿ ಮಾಡಿ ಡ್ರಿಪ್ ಮುಖಾಂತರ ನೀರು ಹಾಯಿಸುತ್ತಾರೆ.ಹಲವಾರು ಬಾರಿ ಬೆಳೆ ಉತ್ತಮವಾಗಿ ಫಸಲು ಬರಬೇಕೆಂದು ಔಷದಿಗಳನ್ನು ಸಿಂಪಡಿಸುತ್ತಾರೆ ಇನ್ನೇನು ಮೂರು ತಿಂಗಳ ನಂತರ ಉತ್ತಮ ಫಸಲು ಸಿಗಬುದು ಎನ್ನುವಷ್ಟರಲ್ಲಿ ಹಣ್ಣಿಗೆ ಬೆಲೆ ಇಲ್ಲದೇ ಇಂತಹ ದುಃಸ್ಥತಿ ರೈತನಿಗೆ ಉಂಟಾಗುತ್ತದೆ.
ಬ್ಯಾಂಕ್‌ಗಳಿಂದ ಸಾಲ, ಕೈಸಾಲ, ಚಿನ್ನದ ಸಾಲ, ಖಾಸಗಿ ಪೈನಾನ್ಸ್ ಅವರಿಂದ ಬಡ್ಡಿಗೆ ತಂದು ಬೆಳೆ ಮಾಡುತ್ತಾರೆ ಸಾಲ ತೀರಿಸಲಾಗದೆ ರೈತರು ವಿಧಿ ಇಲ್ಲದೆ ಆತ್ಮಹತ್ಯೆ ಹಾದಿಯತ್ತ ಪ್ರಯಣಿಸಲು ಮುಂದಾಗುವುದು ಸಹಜ ಎಂಬಾಂತಾಗಿದೆ.