3ನೇ ಮಗು ಇದ್ದರೆ ಜೈಲಿಗೆ ಕಳಿಸಿ ಕಂಗನಾ ಉವಾಚ

ಮುಂಬೈ,ಏ.೨೨- ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೂ ವಿವಾದಕ್ಕೂ ಬಿಟ್ಟಿರಲಾರದ ನಂಟು. ಸುಖಾ ಸುಮ್ಮನೆ ವಿವಾದ ಕಿಡಿ ಹೊತ್ತಿಸಿ ಆಕ್ರೋಶಕ್ಕೆ ಕಾರಣವಾಗುವ ಜಾಯಮಾನದವರು.
ಮೂರನೇ ಮಗು ಹೊಂದಿದವರನ್ನು ಜೈಲಿಗಟ್ಟಬೇಕು ಎಂದು ಹೇಳುವ ಮೂಲಕ ಅನಗತ್ಯವಾಗಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಜನಸಂಖ್ಯೆ ನಿಯಂತ್ರಣಕ್ಕೆ ದೇಶದಲ್ಲಿ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿರುವ ಕಂಗನಾ ರಣಾವತ್ ಇದಕ್ಕಾಗಿ ಹೊಸ ಸಲಹೆ ನೀಡಿದ್ದಾರೆ.
ಇಂದಿನ ಬಿಕ್ಕಟ್ಟನ್ನು ಗಮನಿಸಿದಾಗ ಕನಿಷ್ಠ ಮೂರನೇ ಮಗು ಹೊಂದಿದರೆ ದಂಡ ಅಥವಾ ಕನಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಬೇಕು ಎಂದು ಟ್ವಿಟ್ಟರ್‌ನಲ್ಲಿ ಆಗ್ರಹಿಸಿದ್ದಾರೆ.
ಕಂಗನಾ ರಣಾವತ್ ಅವರ ಈ ಟ್ವೀಟ್ ವಿವಾದಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ನಟಿ ಕಂಗನಾ ರಣಾವತ್ ಅವರ ಸಲಹೆಗೆ ಅನೇಕ ಮಂದಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.