3ನೇ ಬಾರಿ ಸೋನಿಯಾ ವಿಚಾರಣೆ

ನವದೆಹಲಿ, ಜು. ೨೭- ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಕುರಿತಂತೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಇಂದು ಮೂರನೇ ಭಾರಿ ಜಾರಿ ನಿರ್ದೇಶನಾಲಯ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು.
ನಿನ್ನೆ ಇಡಿ ಅಧಿಕಾರಿಗಳು ಆರು ತಾಸುಗಳ ಕಾಲ ವಿಚಾರಣೆ ನಡೆಸಿ ಇಂದು ಮತ್ತೆ ಹಾಜರಾಗುವಂತೆ ಸಮನ್ಸ್ ನೀಡಿದ ಹಿನ್ನೆಲೆಯಲ್ಲಿ ಸೋನಿಯಾ ತಮ್ಮ ಪುತ್ರಿ ಪ್ರಿಯಾಂಕಾ ಗಾಂಧಿ ಅವರ ಜೊತೆ ಇಡಿ ಕಚೇರಿಗೆ ಆಗಮಿಸಿದ್ದರು.
ಈಗಾಗಲೇ ೭೫ ವರ್ಷದ ಸೋನಿಯಾಗಾಂಧಿಯವರನ್ನು ಇಡಿ ಅಧಿಕಾರಿಗಳು ೮ ತಾಸುಗಳ ಕಾಲ ವಿಚಾರಣೆಗೆ ಒಳಪಡಿಸಿ ೬೫-೭೦ ಪ್ರಶ್ನೆಗಳನ್ನು ಕೇಳಿ ಹೇಳಿಕೆಯನ್ನು ದಾಖಲಿಸಿಗೊಂಡಿದ್ದಾರೆ.
ಇಂದು ೧೧ ಗಂಟೆ ವಿಚಾರಣೆಗೆ ಹಾಜರಾಗಿರುವ ಸೋನಿಯಾಗಾಂಧಿ ಅವರಿಗೆ ಇಡಿ ಅಧಿಕಾರಿಗಳು ಪ್ರಶ್ನೆಗಳ ಸುರಿಮಳೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ ಸೋನಿಯಾ ಅವರನ್ನು ವಿಚಾರಣೆಗೆ ಗುರಿಪಡಿಸಿರುವುದನ್ನು ಖಂಡಿಸಿ ರಾಜಧಾನಿ ದೆಹಲಿ ಸೇರಿದಂತೆ ದೇಶದ ಹಲವೆಡೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಗಾಂಧಿ ಕುಟುಂಬಕ್ಕೆ ಕಿರುಕುಳ ನೀಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಹಿಂದೆಯೂ ರಾಹುಲ್ ಗಾಂಧಿಯವರನ್ನು ಇಡಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಗುರಿಪಡಿಸಿ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದರು.