3ನೇ ದಿನಕ್ಕೆ ಕಾಲಿಟ್ಟ ಮುಷ್ಕರ: ಸರ್ಕಾರ, ಸಾರಿಗೆ ನೌಕರರಿಗೆ ಜನರ ಹಿಡಿ ಶಾಪ

ಬೆಂಗಳೂರು,ಏ.೯-ಆರನೇ ವೇತನ ಆಯೋಗ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಸಾರಿಗೆ ಸಂಸ್ಥೆ ನೌಕರರ ಬಿಗಿಪಟ್ಟು ಮುಂದುವರಿದಿರುವುದರಿಂದ ಜನಸಾಮಾನ್ಯರು ತೀವ್ರ ತೊಂದರೆಗೆ ಸಿಲುಕಿ ರಾಜ್ಯ ಸರ್ಕಾರ ಹಾಗೂ ಸಾರಿಗೆ ನೌಕರರಿಗೆ ಹಿಡಿಶಾಪ ಹಾಕತೊಡಗಿದ್ದಾರೆ.
ಈ ನಡುವೆ ಆರನೇ ವೇತನ ಆಯೋಗದ ಅನ್ವಯ ವೇತನ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿದೆ. ಕೆಲಸಕ್ಕೆ ಹಾಜರಾಗುವಂತೆ ಮೇಲಾಧಿಕಾರಿಗಳು ನೀಡುತ್ತಿರುವ ಕಿರುಕುಳದಿಂದ ನೊಂದ ಸಾರಿಗೆ ಸಚಿವರ ತವರು ಬೆಳಗಾವಿ ಜಿಲ್ಲೆಯ ಚಾಲಕ ಕಂ ನಿರ್ವಾಹಕರೊಬ್ಬರು ಆತ್ಮಹತ್ಯೆಗೆ ಶರಣಾದರೆ ಚಾಲಕರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ನಡೆಸಿರುವ ಘಟನೆ ಗದಗದಲ್ಲಿ ನಡೆದಿದೆ.
ಮೂರನೇ ದಿನವು ಮುಷ್ಕರ ಮುಂದುವರಿದಿರುವುದರಿಂದ ಮೆಜೆಸ್ಟಿಕ್‌ನಲ್ಲಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ ಬಸ್‌ಗಳಿಗಾಗಿ ಮೆಜೆಸ್ಟಿಕ್ ನಿಲ್ದಾಣದಲ್ಲಿ ಕಾದುಕುಳಿತ ಪ್ರಯಾಣಿಕರು ಬೇಸತ್ತು ಖಾಸಗಿ ಬಸ್, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಆಟೋಗಳಿಗೆ ಜನರ ಮೊರೆ ಹೋಗಿದ್ದಾರೆ.
ಸರ್ಕಾರ ಸೂಚಿಸಿದ ರೂಟ್ ಮ್ಯಾಪ್‌ನಂತೆಯೇ ಖಾಸಗಿ ವಾಹನಗಳ ಸಂಚಾರ ನಡೆಸಿದ್ದು ಖುದ್ದು ಸ್ಥಳದಲ್ಲೇ ಇದ್ದು ಅಧಿಕಾರಿಗಳಿಂದ ಪರಿಶೀಲನೆ ನಡೆಸಿದ್ದಾರೆ
ಮುಷ್ಕರ ನಡೆಸುತ್ತಿರುವ ನೌಕರರಿಗೆ ಕೆಲಸಕ್ಕೆ ಹಾಜರಾಗದಿದ್ದರೆ ಕೆಲಸದಿಂದ ವಜಾಗೊಳಿಸುವ ಎಚ್ಚರಿಕೆ ನೀಡಲಾಗಿದೆ.
ಯಾವುದಕ್ಕೂ ಜಗ್ಗದೇ ಅನಿರ್ದಿಷ್ಟ ಅವಧಿ ಮುಷ್ಕರಕ್ಕೆ ಕರೆ ನೀಡಿರುವ ಸಾರಿಗೆ ಇಲಾಖೆ ನೌಕರರು ಇಂದು ಕರ್ತವ್ಯಕ್ಕೆ ಹಾಜರಾಗದೆ ಬಿಗಿಪಟ್ಟು ಹಿಡಿದು ಕುಳಿತಿದ್ದಾರೆ.
ಈ ಮಧ್ಯೆ ಸಾರಿಗೆ ಇಲಾಖೆ ಅಧಿಕಾರಿಗಳು ಸಿಬ್ಬಂದಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ನೊಟೀಸ್ ನೀಡಿದ್ದು, ಸಿಬ್ಬಂದಿ ಅದಕ್ಕೆ ಕ್ಯಾರೇ ಎಂದಿಲ್ಲ.
ಅನಿವಾರ್ಯವಾಗಿ ಪ್ರಯಾಣಿಸಬೇಕಾದ ಜನರು ದುಪ್ಪಟ್ಟು ಹಣ ಕೊಟ್ಟು, ಬೆಂಗಳೂರಿನಂತರ ಸಿಟಿಗಳಲ್ಲಿ ಆಟೋ ಚಾಲಕರು ಕೇಳಿದ ದರವನ್ನು ನೀಡಿ ಪ್ರಯಾಣಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಖಾಸಗಿ ಬಸ್ಸುಗಳಿಗೆ ಹಬ್ಬ:
ಸಾರಿಗೆ ನೌಕರರ ಮುಷ್ಕರ ಹಾಗೂ ಯುಗಾದಿ ಸೇರಿ ಸಾಲು, ಸಾಲು ರಜೆ, ಪ್ರಯಾಣಿಕರಿಗೆ ಸಂಕಷ್ಟ ಎದುರಾದರೆ, ಖಾಸಗಿ ಬಸ್ಸುಗಳಿಗೆ ಹಬ್ಬವಾಗಿದೆ.
ನಾಳೆ ವಾರಾಂತ್ಯ, ನಾಡಿದ್ದು ಸೋಮವಾರ ಒಂದು ದಿನ ರಜೆ ಹಾಕಿದರೆ, ಮಂಗಳವಾರ ಯುಗಾದಿ ಹಬ್ಬ ಇರುವುದರಿಂದ ನಾಲ್ಕು ದಿನ ರಜೆಯೆಂದು ಊರಿಗೆ ಹೋಗಬೇಕೆಂದವರು ಖಾಸಗಿ ಬಸ್ಸನ್ನೇ ನಂಬಿಕೊಳ್ಳಬೇಕಾಗಿದೆ, ಇಲ್ಲವೇ ರೈಲುಗಳಲ್ಲಿ ಊರಿಗೆ ಹೋಗುವವರ ಹೆಚ್ಚಾಗಿರುವುದರಿಂದ ರೈಲುಗಳಲ್ಲಿ ದಟ್ಟಣೆ ತೀವ್ರವಾಗಿರಬಹುದು.
ಜನರಿಗೆ ಸಮಸ್ಯೆ:
ಬಸ್ ಮುಷ್ಕರ ಹಿನ್ನೆಲೆಯಲ್ಲಿ ಖಾಸಗಿ ಬಸ್ಸುಗಳು ಕೇಳಿದಷ್ಟು ಹಣ ನೀಡಿ ಊರಿಗೆ ಹೋಗಬೇಕಾದ ಅನಿವಾರ್ಯ ಪ್ರಯಾಣಿಕರದ್ದು. ಬಸ್ ಮುಷ್ಕರ ಹಿನ್ನೆಲೆ ಕಳೆದ ಎರಡು ದಿನಗಳಿಂದ ಉತ್ತರ ಕರ್ನಾಟಕ ಭಾಗಕ್ಕೆ ಖಾಸಗಿ ಬಸ್ ಗಳು ಅಷ್ಟೊಂದು ಕಂಡುಬಂದಿಲ್ಲ.
ಹುಬ್ಬಳ್ಳಿ, ರಾಯಚೂರು, ಕಲಬುರ್ಗಿ, ಬೀದರ್, ಬಾಗಲಕೋಟೆ, ವಿಜಯಪುರ, ಬೆಳಗಾವಿ ಸೇರಿದಂತೆ ಇತರೆ ಭಾಗಕ್ಕೆ ಬಸ್ ಸಮಸ್ಯೆ ಇದ್ದು, ಹಬ್ಬದ ಕಾರಣ ಊರಿಗೆ ಹೋಗುವ ಜನರಿಗೆ ಸಮಸ್ಯೆ ಕಾಡಲಿದೆ.
ಸಾರಿಗೆ ನೌಕರರ ಸೆರೆ:
ಈ ನಡುವೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಬಳ್ಳಾರಿಯಲ್ಲಿ ಇಬ್ಬರು ಸಾರಿಗೆ ನೌಕರರನ್ನು ಬಂಧಿಸಲಾಗಿದೆ. ಕರ್ತವ್ಯಕ್ಕೆ ಹಾಜರಾಗಿದ್ದ ದೇವೆಂದ್ರ ಮಡಿವಾಳ ಎಂಬುವವರಿಗೆ ಮುಷ್ಕರಕ್ಕೆ ಬೆಂಬಲಿಸಬೇಕೆಂದು ತಾಕೀತು ಮಾಡಿ ಬಸ್?ಗೆ ಕಲ್ಲು ತೂರಿ ಗಾಜು ಪುಡಿ-ಪುಡಿ ಮಾಡಿದ್ದಾರೆ. ಈ ಹಿನ್ನೆಲೆ ರಾಜ್ಯ ಸರ್ಕಾರದ ಆಸ್ತಿಗೆ ನಷ್ಟವುಂಟು ಮಾಡಿದ್ದರ ಕುರಿತು ಸಂಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಇಬ್ಬರು ಆರೋಪಿತರನ್ನ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.