3ನೇ ಅಲೆ ತಡೆಗೆ ಸಂಜೆ ಕಠಿಣಕ್ರಮ ಪ್ರಕಟ

ಉಡುಪಿ,ಆ.೧೩- ರಾಜ್ಯದಲ್ಲಿ ಕೊರೊನಾ ೩ನೇ ಅಲೆಯನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮ, ರೂಪಿಸಬೇಕಾದ ನಿಯಮಗಳ ಬಗ್ಗೆ ಇಂದು ಸಂಜೆ ತಜ್ಞರ ತುರ್ತು ಸಭೆ ಕರೆದು ಚರ್ಚೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಉಡುಪಿಯಲ್ಲಿಂದು ವಿಶ್ವ ಅಂಗಾಂಗ ದಾನ ದಿನಾಚರಣೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ೩ನೇ ಅಲೆಯನ್ನು ತಡೆಯಲು ಜಾರಿಗೊಳಿಸಬೇಕಾಗಿರುವ ಟಫ್‌ರೂಲ್ಸ್ ಬಗ್ಗೆ ಈಗ ನಾನು ಮಾತನಾಡಲ್ಲ. ತಜ್ಞರ ಸಲಹೆಯಂತೆ ಸರ್ಕಾರ ನಡೆದುಕೊಳ್ಳಲಿದೆ ಎಂದರು.
ಕೊರೊನಾ ಸೋಂಕು ಹೆಚ್ಚಾಗಿ ಮಕ್ಕಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವುದು ಹಾಗೂ ಈ ತಿಂಗಳ ೨೩ ರಿಂದ ಶಾಲೆ ಆರಂಭ ಮಾಡುವುದರ ಬಗ್ಗೆಯೂ ಇಂದು ತಜ್ಞರ ತುರ್ತು ಸಭೆಯಲ್ಲಿ ಚರ್ಚೆ ನಡೆಸುತ್ತೇನೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಟಫ್‌ರೂಲ್ಸ್ ಜಾರಿ ಬಗ್ಗೆ ಈಗಾಗಲೇ ಮಾತನಾಡಿದ್ದೇನೆ. ಪದೇ ಪದೇ ಅದನ್ನೇ ಮಾತನಾಡುವುದು ಬೇಡ, ಸೋಂಕು ತಡೆಗೆ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕೋ ಆ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತದೆ. ತಜ್ಞರ ಸಲಹೆಯನ್ನು ಪಾಲಿಸುತ್ತೇವೆ ಎಂದರು.
ಅಂಗಾಂಗ ದಾನಕ್ಕೆ ಕರೆ
ಇಂದು ವಿಶ್ವ ಅಂಗಾಂಗ ದಾನ ದಿನಾಚರಣೆ ತಾವು ಅಂಗಾಂಗ ದಾನಕ್ಕೆ ಸಹಿ ಹಾಕಿರುವುದಾಗಿ ಹೇಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಸ್ತುತ ಅಂಗಾಂಗ ಕಸಿಗೆ ತಂತ್ರಜ್ಞಾನಗಳು ಲಭ್ಯವಿದೆ. ಅಂಗಾಂಗ ಕಸಿಯ ಮೂಲಕ ಜೀವಗಳನ್ನು ಉಳಿಸಲು ಸಾಧ್ಯ. ಪ್ರತಿಯೊಬ್ಬರು ಅಂಗಾಂಗ ದಾನಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ದೇಹದ ಅಂಗಾಂಗಗಳು ಮಣ್ಣಲ್ಲಿ ಮಣ್ಣಾಗುವ ಮೊದಲು ದಾನ ಮಾಡಿದರೆ ಸಾವಿರಾರು ಜೀವಗಳನ್ನು ಉಳಿಸಬಹುದು. ಹಾಗಾಗಿ, ಈ ದಿನದಂದು ಅಂಗಾಂಗ ದಾನಕ್ಕೆ ಎಲ್ಲರೂ ಸಂಕಲ್ಪ ಮಾಡಬೇಕು. ಅಂಗಾಂಗ ದಾನಕ್ಕೆ ಮುಂದಾಗಬೇಕು ಎಂದು ಅವರು ಹೇಳಿದರು.