3ನೇ ಅಲೆ ತಡೆಗೆ ತಯಾರಿ

ಬೆಂಗಳೂರು,ಜೂ,೧೦- ಕೊರೊನಾ ೩ನೇ ಅಲೆಯನ್ನು ಎದುರಿಸಲು ಎಲ್ಲ ಸಿದ್ಧತೆಗಳನ್ನು ನಡೆಸಿದ್ದೇವೆ, ೨ನೇ ಅಲೆ ಎದುರಿಸಲು ಮಾಡಿಕೊಂಡಿರುವ ಸಿದ್ಧತೆಗಳು ೩ನೇ ಅಲೆಯವರೆಗೂ ಮುಂದುವರೆಯುತ್ತವೆ ಎಂದು ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತ ಗೌರವ್‌ಗುಪ್ತಾ ಹೇಳಿದ್ದಾರೆ.
ಕೊರೊನಾ ಮೂರನೇ ಅಲೆ ನಿಗ್ರಹಕ್ಕೆ ಈಗಿನಿಂದಲೇ ಸಿದ್ಧತೆಗಳನ್ನು ನಡೆಸಿದ್ದೇವೆ. ಅಗತ್ಯ ಬಿದ್ದರೆ ಹೆಚ್ಚುವರಿಯಾಗಿ ವೈದ್ಯರು ಹಾಗೂ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುತ್ತೇವೆ, ೨ನೇ ಅಲೆ ನಿಗ್ರಹಕ್ಕೆ ಕೈಗೊಂಡ ಕ್ರಮಗಳು ೩ನೇ ಅಲೆವರೆಗೂ ಮುಂದುವರೆಯುತ್ತದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕು ಕಡಿಮೆಯಾಗಿರುವುದರಿಂದ ಅನ್‌ಲಾಕ್ ಮಾಡುವ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಕೈಗೊಳ್ಳಲಿದ್ದಾರೆ. ಪರಿಸ್ಥಿತಿಯನ್ನು ನೋಡಿಕೊಂಡು ಒಂದು ಒಳ್ಳೆಯ ನಿರ್ಧಾರವನ್ನು ಮುಖ್ಯಮಂತ್ರಿಗಳು ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಹಂತ ಹಂತಗಳಲ್ಲಿ ಅನ್‌ಲಾಕ್ ಮಾಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ. ಮುಖ್ಯಮಂತ್ರಿಗಳು ಎಲ್ಲರೊಡನೆ ಚರ್ಚಿಸಿ ತೀರ್ಮಾನ ಮಾಡುವರು. ಬಿಬಿಎಂಪಿ ಮುಖ್ಯ ಆಯುಕ್ತರಾಗಿ ಮುಖ್ಯಮಂತ್ರಿಗಳ ಸಭೆಯಲ್ಲಿ ತಮ್ಮ ಅಭಿಪ್ರಾಯವನ್ನು ಹೇಳುವುದಾಗಿ ಅವರು ಹೇಳಿದರು.
ಹಾಸಿಗೆಗಳ ವಾಪಸ್
ಬೆಂಗಳೂರಿನಲ್ಲಿ ಸೋಂಕು ಕಡಿಮೆಯಾಗಿರುವುದರಿಂದ ಖಾಸಗಿ ಆಸ್ಪತ್ರೆಗಳಿಗೆ ಹಾಸಿಗೆಗಳನ್ನು ವಾಪಸ್ ಮಾಡುವ ತೀರ್ಮಾನವನ್ನು ಕಂದಾಯ ಸಚಿವ ಆರ್. ಅಶೋಕ್ ಅವರ ನೇತೃತ್ವದ ಸಭೆಯಲ್ಲಿ ಕೈಗೊಳ್ಳಲಾಗಿದೆ. ಅದರಂತೆ ಖಾಸಗಿ ಆಸ್ಪತ್ರೆಗಳಿಂದ ಪಡೆದಿದ್ದ ಶೇ ೫೦ರಷ್ಟು ಸಾಮಾನ್ಯ ಹಾಸಿಗೆಗಳಲ್ಲಿ ಶೇ. ೩೦ ರಷ್ಟನ್ನು ವಾಪಸ್ ಮಾಡಲು ಮತ್ತು ಶೇ. ೨೦ ರಷ್ಟು ಆಮ್ಲಜನಕ ಸೌಲಭ್ಯ ಹಾಸಿಗೆಗಳನ್ನು ಹಿಂದಿರುಗಿಸಲು ನಿರ್ಧರಿಸಲಾಗಿದೆ.
ಐಸಿಯು ಮತ್ತು ವೆಂಟಿಲೇಟರ್ ಸಹಿತ ಹಾಸಿಗೆಗಳನ್ನು ಹಿಂದಿರುಗಿಸದೇ ಸರ್ಕಾರದ ಬಳಿಯೆ ಉಳಿಸಿಕೊಳ್ಳುವ ತೀರ್ಮಾನವಾಗಿದೆ.