3ನೇ ಅಲೆ ತಡೆಗೆ ಕ್ರಮ: ಅಶೋಕ್

ಬೆಂಗಳೂರು, ಡಿ. ೯- ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ೩ನೇ ಅಲೆ ಹರಡದಂತೆ ಕಠಿಣ ಕ್ರಮ ಕೈಗೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಕಠಿಣ ನಿಯಮ ಜಾರಿಗೆ ತರುವ ವಿಚಾರದ ಬಗ್ಗೆ ಸಂಪುಟ ಸಭೆಯಲ್ಲಿ ಸಮಾಲೋಚನೆ ನಡೆಸಲಾಗುವುದು. ೨ನೇ ಅಲೆಯಿಂದ ನಾವು ಪಾಠ ಕಲಿತಿದ್ದೇವೆ. ಆ ವೇಳೆಯಲ್ಲಿ ಸಾಕಷ್ಟು ಸಾವು- ನೋವು ಸಂಭವಿಸಿವೆ. ೩ನೇ ಅಲೆ ಮತ್ತೆ ಬರಬಾರದು. ಜನರನ್ನು ರಕ್ಷಣೆ ಮಾಡುವ ಕೆಲಸ ಸರ್ಕಾರ ಮಾಡಲಿದೆ. ಸೂಕ್ತ ಮುಂಜಾಗೃತ ಕ್ರಮ ತೆಗೆದುಕೊಳ್ಳುತ್ತೇವೆ. ಆದರೆ ಸದ್ಯಕ್ಕೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ತಿಳಿಸಿದರು.
ಈಗಾಗಲೇ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ಹಾಗೂ ಆಕ್ಸಿಜನ್ ಬೆಡ್‌ಗಳನ್ನು ಸುಸ್ಥಿತಿಯಲ್ಲಿಡಲು ಸೂಚಿಸಿದ್ದೇವೆ. ತಜ್ಞರ ಸಲಹೆಯಂತೆ ಕ್ರಮ ತೆಗೆದುಕೊಳ್ಳುತ್ತೇವೆ. ಎಲ್ಲವೂ ಕಾಂಗ್ರೆಸ್‌ನವರಿಂದ ತಿಳಿದುಕೊಂಡು ಮಾಡಬೇಕಿಲ್ಲ ಎಂದರು.