3ನೇ ಅಲೆ ತಡೆಗೆ ಕೋವಿಡ್ ವಾರ್ಡ್ ಆರಂಭ

ಗದಗ ಜೂ.10 : ಕೋವಿಡ್-19 ಒ0ದು ಹಾಗೂ ಎರಡನೇ ಅಲೆಯನ್ನು ಯಶಸ್ವಿಯಾಗಿ ಎದುರಿಸಿ ಈಗ ಮೂರನೇ ಅಲೆಯ ಭೀತಿಯಿದೆ. ಹೀಗಾಗಿ ಮಕ್ಕಳ ರಕ್ಷಣೆಗೆ ರೋಣ ಸರ್ಕಾರ ಆಸ್ಪತ್ರೆಯಲ್ಲಿ 10 ಬೆಡ್‍ಗಳ ಕೋವಿಡ್ ವಾರ್ಡ್ ತೆರೆಯಲಾಗಿದೆ ಎಂದು ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ. ಹಾದಿಮನಿ ಹೇಳಿದರು.
ಗದಗ ಜಿಲ್ಲೆಯ ರೋಣ ತಾಲೂಕಿನ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಜರುಗಿದ ಕೋವಿಡ್ ನಿಯಂತ್ರಣಾ ಸಭೆಯಲ್ಲಿ ಅವರು ಮಾತನಾಡಿದರು.
ಈಗಾಗಲೇ ಎರಡು ಕೊರೊನಾ ಅಲೆಗಳನ್ನು ಎದುರಿಸಿದ ನಮಗೆ ಮೂರನೇಯ ಅಲೆಯನ್ನು ಎದುರಿಸಲು ಸನ್ನದ್ಧರಾಗುವಂತೆ ತಜ್ಞರು ಹಾಗೂ ಸರ್ಕಾರ ಸೂಚಿಸಿದ್ದು, ಹೀಗಾಗಿ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅಲ್ಲದೇ, ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಹೆಚ್ಚಿನ ನಿಗಾ ವಹಿಸಬೇಕಾಗಿದ್ದು, ವೈದ್ಯರ ತಂಡವೂ ಸನ್ನದ್ಧವಾಗಿದೆ ಎಂದರು.
ಗ್ರಾಮೀಣ ಭಾಗಗಳಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಂದ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸವು ನಡೆಯುತ್ತಿದ್ದು, ಆರೋಗ್ಯ ಇಲಾಖೆಯ ಸಿಬ್ಬಂದಿ ದಿನದ 24 ಘಂಟೆಗಳ ಕಾಲ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ. ಪಾಲಕರು ಹೆಚ್ಚಾಗಿ ಹೊರಗಡೆ ಅಲೆದಾಡುವುದನ್ನು ನಿಲ್ಲಿಸುವ ಮೂಲಕ ಕೋವಿಡ್ ವೈರಸ್‍ನಿಂದ ಮಕ್ಕಳನ್ನು ರಕ್ಷಿಸಬೇಕು. ಕೋವಿಡ್ ತಡೆಗಟ್ಟುವಲ್ಲಿ ತಾಲೂಕಾಡಳಿತದ ಜೊತೆಗೆ ಕೈಜೋಡಿಸಬೇಕು ಎಂದರು.
ಆರೋಗ್ಯಕ್ಕೆ ಆದ್ಯತೆ ನೀಡಿ: ಈಗಾಗಲೇ ರೋಣ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ರಕ್ಷಣೆಗಾಗಿ 10 ಬೆಡ್‍ಗಳ ವಾರ್ಡ್‍ನ್ನು ತೆರೆಯಲಾಗಿದೆ. ಅಗತ್ಯ ಬಿದ್ದಲ್ಲಿ ಹಿರಿಯ ಅಧಿಕಾರಿಗಳ ಹಾಗೂ ವೈದ್ಯರ ಮಾರ್ಗದರ್ಶನದಲ್ಲಿ ಬೆಡ್‍ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು, ಮುಖ್ಯವಾಗಿ ಮುಂಗಾರು ಆರಂಭಗೊಂಡಿದ್ದು, ಜನರು ಮಳೆ ನೀರು ನಿಲ್ಲದಂತೆ ಪರಿಸರವನ್ನು ಸ್ವಚ್ಛವಾಗಿಡಬೇಕು. ಇಲ್ಲದಿದ್ದರೆ ಸೊಳ್ಳೆಗಳು ಉತ್ಪತ್ತಿಯಾಗಿ ಮಲೇರಿಯಾ ಮುಂತಾದ ಕಾಯಿಲೆಗಳು ಬರುವ ಸಂಭವವಿದೆ ಎಂದು ಎಚ್ಚರಿಸಿದರು.
ತಹಸೀಲ್ದಾರ್ ಜೆ.ಬಿ. ಜಕ್ಕನಗೌಡ್ರ, ಅಶೋಕ ಕಲಘಟಗಿ, ಜೆ.ಟಿ. ಕೊಪ್ಪದ, ಇಒ ಸಂತೋಷ ಪಾಟೀಲ, ರವಿ ಬಾರಕೇರ, ಎಂ.ಮಹದೇವಪ್ಪ, ಬಿ.ಎಸ್.ಉಪ್ಪಾರ, ಬಾಲಚಂದ್ರ ಸಂಗನಾಳ, ಆರ್.ಸಿ.ಶಹಾಪೂರ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.