3ನೇ ಅಲೆಯ ಸೋಂಕಿನ ಭೀತಿ: ಕರ್ನಾಟಕದಲ್ಲಿ ಮಕ್ಕಳ ಕೋವಿಡ್ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಡಾ. ಅಜಯಸಿಂಗ್ ಆಗ್ರಹ

ಕಲಬುರಗಿ.ಜೂ.2: ಮಹಾಮಾರಿ ಕೊರೋನಾ ಎರಡನೇ ಅಲೆಯ ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದರೂ ಸಹ ಮೂರನೇ ಅಲೆಯು ಇನ್ನೆರಡು ತಿಂಗಳಲ್ಲಿ ಆರಂಭವಾಗಲಿದೆ ಎಂದು ಈಗಾಗಲೇ ತಜ್ಞ ವೈದ್ಯರು ಹೇಳಿದ್ದಾರೆ. ಅದರಲ್ಲಿಯೂ 3ನೇ ಅಲೆಯ ಸೋಂಕು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಂಭವ ಇರುವುದರಿಂದ ಕೂಡಲೇ ರಾಜ್ಯ ಸರ್ಕಾರವು ಮಕ್ಕಳಿಗಾಗಿಯೇ ಪ್ರತ್ಯೇಕ ಕೋವಿಡ್ ಆಸ್ಪತ್ರೆಗಳನ್ನು ನಿರ್ಮಿಸಬೇಕು ಎಂದು ರಾಜ್ಯ ವಿಧಾನಸಭೆಯಲ್ಲಿನ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಜೇವರ್ಗಿ ಕ್ಷೇತ್ರದ ಶಾಸಕರೂ ಆದ ಕಾಂಗ್ರೆಸ್ ಪಕ್ಷದ ಆರೋಗ್ಯ ಹಸ್ತದ ರಾಜ್ಯ ಕಾರ್ಯಪಡೆಯ ಮುಖ್ಯಸ್ಥ ಡಾ. ಅಜಯಸಿಂಗ್ ಅವರು ಹೇಳಿದರು.
ಬುಧವಾರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಪ್ರಧಾನಿಯವರ ಸಲಹೆಗಾರ ಡಾ. ಕೆ. ವಿಜಯರಾಘವನ್ ಅವರು ಜುಲೈ ಕೊನೆಯ ವಾರದಲ್ಲಿ ಇಲ್ಲವೇ ಆಗಸ್ಟ್‍ನಲ್ಲಿ ಕೋವಿಡ್ ಮೂರನೇ ಅಲೆಯ ಸೋಂಕು ಹರಡುವ ಸಾಧ್ಯತೆಯ ಕುರಿತು ತಿಳಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಮೂರನೇ ಅಲೆಯನ್ನು ನಿಯಂತ್ರಿಸುವುದರೊಂದಿಗೆ ಪರಿಣಾಮ ಬೀರಲಿರುವ ಮಕ್ಕಳಿಗಾಗಿ ಸೂಕ್ತ ಚಿಕಿತ್ಸೆಗಾಗಿ ಎಲ್ಲ ರೀತಿಯ ವೈದ್ಯಕೀಯ ಕ್ರಮಗಳನ್ನು ಈಗಲೇ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೋವಿಡ್ ಎರಡನೇ ಅಲೆಯ ಸೋಂಕಿನ ಸಂದರ್ಭದಲ್ಲಿಯೇ ಅನೇಕ ಮಕ್ಕಳಿಗೂ ಸೋಂಕು ಹರಡಿದೆ. ಆ ಮಕ್ಕಳಿಗೆ ಇಲ್ಲಿಯವರೆಗೂ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಲಸಿಕೆಯನ್ನು ಕೊಡುವ ಕ್ರಮವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗೊಂಡಿಲ್ಲ. ಈಗಾಗಲೇ ಅಮೇರಿಕದ ಫೇಜರ್ ಕಂಪೆನಿಯು 12ರಿಂದ 15 ವರ್ಷದ ಮಕ್ಕಳಿಗಾಗಿಯೇ ಕೋವಿಡ್ ನಿಯಂತ್ರಣದ ಲಸಿಕೆಯನ್ನು ಕೊಡಲು ಆರಂಭಿಸಿದ್ದು, 20 ವಯೋಮಿತಿಯೊಳಗಿನವರಿಗೂ ಲಸಿಕೆ ಕೊಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಕೂಡಲೇ ಆ ಲಸಿಕೆಯನ್ನು ಕೇಂದ್ರ ಸರ್ಕಾರ ತರಿಸಿಕೊಳ್ಳಬೇಕು ಎಂದು ಕೋರಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆಯುವುದಾಗಿ ಡಾ. ಅಜಯಸಿಂಗ್ ಅವರು ತಿಳಿಸಿದರು.
ಎರಡನೇ ಅಲೆಯ ಕೋವಿಡ್ ಸೋಂಕು ಅನೇಕ ಬಾಲಕರಿಗೆ ಹರಡಿದೆ. ಸ್ವತ: ನನ್ನ ಪುತ್ರ ಹಾಗೂ ಪುತ್ರಿಗೂ ಹಾಗೂ ನನ್ನ ಸಹೋದರಿಯ ಮಕ್ಕಳಿಗೂ ಸಹ ಕೋವಿಡ್ ಸೋಂಕು ಹರಡಿತ್ತು. ಹೀಗಾಗಿ ಪ್ರಸ್ತುತ ಸಂದರ್ಭದಲ್ಲಿನ ಕೋವಿಡ್ ಪರಿಸ್ಥಿತಿಯನ್ನು ನೋಡಿದರೆ ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕುರಿತು ಈಗಾಗಲೇ ತಜ್ಞ ವೈದ್ಯರು ಹೇಳಿದ್ದಾರೆ. ಆ ಹಿನ್ನೆಲೆಯಲ್ಲಿ ಎಲ್ಲ ರೀತಿಯಲ್ಲಿ ಪೂರ್ವ ಸಿದ್ಧತೆಗಳನ್ನು ಸಹ ರಾಜ್ಯ ಸರ್ಕಾರವು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಕೋವಿಡ್ ಮೊದಲನೇ ಅಲೆಯ ಸೋಂಕು 60 ವರ್ಷ ಮೇಲ್ಟಟ್ಟವರಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿತು. ಅದೇ ರೀತಿ 50 ವರ್ಷ ಮೇಲ್ಪಟ್ಟವರಲ್ಲಿ ಎರಡನೇ ಅಲೆಯ ಸೋಂಕು ಹರಡಿತ್ತು. ಈಗ ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ವ್ಯಾಪಕವಾಗಿ ಹರಡುವ ಕುರಿತು ಕಳವಳ ವ್ಯಕ್ತಪಡಿಸಿದ್ದು, ಈ ಕುರಿತು ಸೂಕ್ತ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ದೇಶದಲ್ಲಿ ಅಹ್ಮದ್‍ನಗರದಲ್ಲಿ ಅತೀ ಹೆಚ್ಚು ಅಂದರೆ 8000 ಮಕ್ಕಳಲ್ಲಿ ಕೋವಿಡ್ ಎರಡನೇ ಅಲೆಯ ಸೋಂಕು ಪತ್ತೆಯಾಗಿತ್ತು. ಕಲ್ಯಾಣ ಕರ್ನಾಟಕದ ಬೀದರ್ ಹಾಗೂ ಕಲಬುರ್ಗಿ ಜಿಲ್ಲೆಗಳಲ್ಲಿಯೂ ಸಹ ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಕಲಬುರ್ಗಿ ಜಿಲ್ಲೆಯಲ್ಲಿ ಎರಡನೇ ಅಲೆಯಲ್ಲಿ 0ದಿಂದ 10 ವಯೋಮಿತಿಯ 2400 ಮಕ್ಕಳಲ್ಲಿ, 10ರಿಂದ 20 ವಯೋಮಿತಿಯ ಮಕ್ಕಳಲ್ಲಿ 6100 ಮಕ್ಕಳೂ ಸೇರಿದಂತೆ ಒಟ್ಟು 8,500 ಮಕ್ಕಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿತ್ತು. ಇದನ್ನು ನೋಡಿದರೆ ಕೋವಿಡ್ ಎರಡನೇ ಅಲೆಯಯಲ್ಲಿ ಶೇಕಡಾ 15ರಷ್ಟು ಸೋಂಕಿತರು ಮಕ್ಕಳಾಗಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಒಂದು ಅಂದಾಜಿನ ಪ್ರಕಾರ ಸುಮಾರು 4.50 ಲಕ್ಷ ಮಕ್ಕಳು ಅಪೌಷ್ಠಿಕತೆಯಿಂದ ನರಳುತ್ತಿದ್ದಾರೆ. ಅದರಲ್ಲಿಯೂ ಕಲ್ಯಾಣ ಕರ್ನಾಟಕದ ಕಲಬುರ್ಗಿ ಮತ್ತು ರಾಯಚೂರು ಹಾಗೂ ಚಾಮರಾಜನಗರ ಸೇರಿ ಮೂರು ಜಿಲ್ಲೆಗಳಲ್ಲಿ ಸುಮಾರು ಒಂದು ಲಕ್ಷ ಮಕ್ಕಳು ಅಪೌಷ್ಠಿಕತೆಯನ್ನು ಹೊಂದಿದ್ದು, ಶೇಕಡಾ 36ರಷ್ಟು ಮಕ್ಕಳು ಅಪೌಷ್ಠಿಕತೆಯಿಂದ ನರಳುತ್ತಿದ್ದಾರೆ. ಕಲಬುರ್ಗಿ, ಬೀದರ್, ಕೊಪ್ಪಳ್, ರಾಯಚೂರು, ಚಾಮರಾಜನಗರ, ಹಾಸನ್, ಚಿತ್ರದುರ್ಗ ಸೇರಿ ಒಟ್ಟು ಕರ್ನಾಟಕದ ಏಳು ಜಿಲ್ಲೆಗಳಲ್ಲಿ 0ದಿಂದ 6 ವರ್ಷದೊಳಗಿನ ಅಪೌಷ್ಠಿಕ ಮಕ್ಕಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ಜಿಲ್ಲೆಯಲ್ಲಿ ಸುಮಾರು 2,23,241, ಜೇವರ್ಗಿ ತಾಲ್ಲೂಕಿನಲ್ಲಿ 280028 ಮಕ್ಕಳು ಹಾಗೂ ಜಿಲ್ಲೆಯಲ್ಲಿ 6ರಿಂದ 14 ವರ್ಷ ವಯೋಮಿತಿಯೊಳಗಿನ 5,35,715 ಹಾಗೂ ಜೇವರ್ಗಿ ತಾಲ್ಲೂಕಿನಲ್ಲಿ 63,963 ಮಕ್ಕಳು ಇದ್ದು, ಆ ಸಂಖ್ಯೆಗೆ ಅನುಗುಣವಾಗಿ ಆ ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ರಾಜ್ಯ ಸರ್ಕಾರವು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ನಗರದ ಇಎಸ್‍ಐಸಿ ಆಸ್ಪತ್ರೆಯಲ್ಲಿ 40 ಹಾಗೂ ಜಿಮ್ಸ್ ಆಸ್ಪತ್ರೆಯಲ್ಲಿ 40 ಹಾಗೂ ಇತರೆ ಹತ್ತು ಬೆಡ್‍ಗಳು ಸೇರಿ ಒಟ್ಟು 100 ಬೆಡ್‍ಗಳ ಸೌಲಭ್ಯವು ಮಾತ್ರ ಮಕ್ಕಳಿಗೆ ಲಭ್ಯವಾಗುತ್ತಿದೆ. ಆದ್ದರಿಂದ ಇನ್ನೂ ಎರಡು ತಿಂಗಳು ಅವಧಿ ಇದ್ದು, ಕೂಡಲೇ ಅಪೌಷ್ಠಿಕತೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೂಡಲೇ ಲಸಿಕೆಯನ್ನು ಹಾಕಿಸುವುದು ಹಾಗೂ ಸುಸಜ್ಜಿತ ಆಸ್ಪತ್ರೆಗಳನ್ನು ಮಕ್ಕಳಿಗಾಗಿಯೇ ಕೋವಿಡ್ ಚಿಕಿತ್ಸೆಗಾಗಿ ಆರಂಭಿಸಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಶಾಸಕರಾದ ಶ್ರೀಮತಿ ಕನೀಜ್ ಫಾತಿಮಾ, ಎಂ.ವೈ. ಪಾಟೀಲ್, ಮಾಜಿ ಶಾಸಕರಾದ ಅಲ್ಲಮಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ್, ಬಿ.ಆರ್. ಪಾಟೀಲ್, ಪಕ್ಷದ ಜಿಲ್ಲಾಧ್ಯಕ್ಷ ಜಗದೇವ್ ಗುತ್ತೇದಾರ್ ಕಾಳಗಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶ್ರೀಮತಿ ಲತಾ ರವಿ ರಾಠೋಡ್, ಮುಖಂಡರಾದ ಸುಭಾಷ್ ರಾಠೋಡ್, ಡಾ. ಕೃಷ್ಣಾಜಿ ಕುಲಕರ್ಣಿ, ಬಾಬುರಾವ್ ಜಹಾಗೀರದಾರ್ ಶರಣು ಮೋದಿ ಮುಂತಾದವರು ಉಪಸ್ಥಿತರಿದ್ದರು.