274 ಭಾರತೀಯರ ವಿಮಾನ ದೆಹಲಿಯತ್ತ ಪಯಣ

ಟೆಲ್‌ಅವೀವ್,ಅ.೧೫:ಆಪರೇಷನ್ ಅಜಯ್ ಕಾರ್ಯಾಚರಣೆ ಮುಂದುವರೆದಿದ್ದು, ೩೭೪ ಮಂದಿ ಭಾರತೀಯರನ್ನು ಹೊತ್ತ ೪ನೇ ವಿಮಾನ ಇಂದು ಮುಂಜಾನೆ ಇಸ್ರೇಲ್‌ನಿಂದ ಭಾರತಕ್ಕೆ ಪ್ರಯಾಣ ಬೆಳೆಸಿದೆ. ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮಾಹಿತಿ ನೀಡಿದ್ದಾರೆ.
ಹಮಾಸ್ ಉಗ್ರರು ಮತ್ತು ಇಸ್ರೇಲ್ ನಡುವಣ ಯುದ್ಧ, ಸಂಘರ್ಷ ತಾರಕಕೇರಿದೆ. ಈ ಹಿನ್ನೆಲೆಯಲ್ಲಿ ಇಸ್ರೇಲ್‌ನಲ್ಲಿರುವ ೧೮ ಸಾವಿರ ಭಾರತೀಯ ನಾಗರೀಕರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆ ತರಲು ಕೇಂದ್ರ ಸರ್ಕಾರ ಆಪರೇಷನ್ ಅಜಯ್ ರಕ್ಷಣಾ ಕಾರ್ಯಾಚರಣೆ ಬಿರುಸುಗೊಳಿಸಿದೆ.
ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೂ ಆತಂಕದಲ್ಲಿರುವ ಭಾರತೀಯ ನಾಗರಿಕರಿಗೆ ಸಹಾಯವಾಣಿ ಸ್ಥಾಪಿಸಿದೆ. ಅಲ್ಲದೆ ತುರ್ತು ಸಂದರ್ಭಗಳಲ್ಲಿ ರಾಯಭಾರ ಕಚೇರಿಯನ್ನು ಸಂಪರ್ಕಿಸುವಂತೆಯೂ ಸೂಚಿಸಿದೆ.
ಮೊದಲ ವಿಮಾನ ೧೯೭ ಜನರನ್ನು ಹೊತ್ತ ವಿಮಾನ ನಿನ್ನೆ ದೆಹಲಿಗೆ ಆಗಮಿಸಿತ್ತು. ೨೩೫ ಭಾರತೀಯ ನಾಗರೀಕರನ್ನು ಹೊತ್ತ ೨ನೇ ವಿಮಾನ ಇಸ್ರೇಲ್‌ನಿಂದ ನವದೆಹಲಿ ವಿಮಾನನಿಲ್ದಾಣಕ್ಕೆ ಆಗಮಿಸಿತು.
ಈಗ ೪ನೇ ವಿಮಾನ ಟೆಲ್‌ಅವೀವ್‌ನಿಂದ ಭಾರತದತ್ತ ಹೊರಟಿದೆ ಎಂದು ಸಚಿವ ಜೈಶಂಕರ್ ಮಾಹಿತಿ ನೀಡಿದ್ದಾರೆ.