27 ವಾರ್ಡುಗಳಲ್ಲಿ ಬಿಜೆಪಿ ವಿಜಯ ಪತಾಕೆ:ಶ್ರೀರಾಮುಲು

ಬಳ್ಳಾರಿ ಏ 25 : ನಾಡಿದ್ದು ನಡೆಯುವ ಇಲ್ಲಿನ ಮಹಾ ನಗರ ಪಾಲಿಕೆಯ ಸದಸ್ಯರ ಚುನಾವಣೆಯಲ್ಲಿ 39 ಸ್ಥಾನಗಳ ಪೈಕಿ 27 ವಾರ್ಡುಗಳಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿಗಳು ವಿಜಯದ ಪತಾಕೆ ಹಾರಿಸಲಿದ್ದಾರೆಂಬ ವಿಶ್ವಾಸವನ್ನು ಸಮಾಜ ಕಲ್ಯಾಣ ಸಚಿವ, ಪಕ್ಷದ ಹಿರಿಯ ಮುಖಂಡ ಶ್ರೀರಾಮುಲು ಹೇಳಿದ್ದಾರೆ.
ಸಂಜೆವಾಣಿಯೊಂದಿಗೆ ಮಾತನಾಡಿದ ಅವರು. ಎಲ್ಲಾ ವಾರ್ಡುಗಳಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ರೀತಿಯಲ್ಲಿ ಅಧಿಕೃತ ಅಭ್ಯರ್ಥಿಗಳು ಇದ್ದರೂ, ಅವರವರೇ ಒಬ್ಬರಿಗೊಬ್ಬರು ಕಾಲು ಎಳೆಯುತ್ತಾ ಸಾಗಿದ್ದಾರೆ. ನಮ್ಮಲ್ಲಿ ಒಗ್ಗಟ್ಟಿದೆ. ಕಾರ್ಯಕರ್ತರ ಶ್ರಮವಿದೆ. ಪ್ರತಿ ವಾರ್ಡಿನಲ್ಲೂ ಸಂಘಟನೆ ಇದೆ. ಆದರೂ ಕಾಂಗ್ರೆಸ್‍ಗೆ ಸಾಂಪ್ರದಾಯಿಕ ಮತಗಳಿರುವುದರಿಂದ ಎಲ್ಲಾ ವಾರ್ಡಿನಲ್ಲೂ ಗೆಲುವು ಅಸಾಧ್ಯ. ಅದಕ್ಕಾಗಿ ನಮ್ಮ ಪ್ರಯತ್ನ ಮತ್ತು ಪಕ್ಷ ಬಲ, ಅಭ್ಯರ್ಥಿಗಳ ಪರಿಶ್ರಮ. ಸ್ಥಳೀಯವಾಗಿ ಅವರಿಗೆ ಮತದಾರರ ಜೊತೆ ಇರುವ ಸಂಬಂಧದಿಂದ 27 ವಾರ್ಡಿನಲ್ಲಿ ನಮ್ಮ ಅಭ್ಯರ್ಥಿಗಳು ಗೆದ್ದು ಪಾಲಿಕೆಯಲ್ಲಿ ಆಡಳಿತಕ್ಕೆ ಬರುವುದು ಖಚಿತ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿ. 27 ಕ್ಕಿಂತ ಹೆಚ್ಚು ಗೆಲ್ಲಬಾರದೆಂದು ಏನಿಲ್ಲ. ಈ ಹಿಂದೆ ನಮ್ಮ ನಿರೀಕ್ಷೆಗೂ ಮೀರಿ 2007 ರಲ್ಲಿ 35 ವಾರ್ಡುಗಳ ಪೈಕಿ 30 ರಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಆಯ್ಕೆ ಯಾಗಿದ್ದರು ಎಂಬುದನ್ನು ಸ್ಮರಿಸಿದರು.