27 ರಂದು ಗಡಿನಾಡು ಸಾಂಸ್ಕøತಿಕ ಉತ್ಸವ : ರವಿ ಪೂಜಾರಿ

ಅಥಣಿ:ನ.24: ಕನ್ನಡ ಭಾಷೆ ಉಳಿದರೆ ಕನ್ನಡಿಗ ಮತ್ತು ಕನ್ನಡ ನಾಡು ಉಳಿಯುತ್ತದೆ. ನಾಡು ನುಡಿ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ ಎಂದು ಸಮಾಜ ಸೇವಕಿ ಗೀತಾ ತೋರಿ ಹೇಳಿದರು.
ಅವರು ಅಥಣಿ ಪಟ್ಟಣದಲ್ಲಿ ಕನ್ನಡಿಗರ ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್, ಚಮಕೇರಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ಬರುವ ರವಿವಾರ. 27ರಂದು ಆಯೋಜಿಸಲಾಗಿರುವ ಗಡಿನಾಡು ಸಂಸ್ಕೃತಿಕ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಗಡಿ ಭಾಗದಲ್ಲಿ ಕನ್ನಡಿಗರನ್ನ ಮತ್ತು ಸರ್ಕಾರವನ್ನ ಜಾಗ್ರತಗೊಳಿಸಲು ಇಂತಹ ಗಡಿನಾಡ ಉತ್ಸವಗಳು ಅಗತ್ಯ ಎಂದು ಹೇಳಿದರು.
ಗಡಿನಾಡು ಸಂಸ್ಕೃತಿಕ ಉತ್ಸವದ ಸಮ್ಮೇಳನ ಅಧ್ಯಕ್ಷ ರವಿ ಪೂಜಾರಿ ಮಾತನಾಡಿ ಗಡಿ ಭಾಗದಲ್ಲಿ ಕನ್ನಡ ಉತ್ಸವಗಳನ್ನು ನಡೆಸುವ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಮನೆ ಮನಗಳಿಗೆ ಪಸರಿಸುವ ಕೆಲಸವನ್ನು ಪ್ರತಿಯೊಬ್ಬ ಕನ್ನಡಿಗರು ಮಾಡಲೇಬೇಕು. ಗಡಿ ಭಾಗದಲ್ಲಿ ಅನ್ಯ ಭಾಷೆಗಳ ಪ್ರಭಾವದಿಂದ ಕನ್ನಡ ಭಾಷೆಗೆ ಮತ್ತು ಕನ್ನಡಿಗರಿಗೆ ಹಿನ್ನಡೆಯಾಗುತ್ತಿದೆ. ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರಕುವ ನಿಟ್ಟಿನಲ್ಲಿ ಸರ್ಕಾರವನ್ನ ಎಚ್ಚರಿಸಬೇಕಾಗಿದೆ ಎಂದು ಹೇಳಿದ ಅವರು ಬರುವ ರವಿವಾರ ಅಥಣಿಯಲ್ಲಿ ನಡೆಯುವ ಗಡಿನಾಡ ಸಂಸ್ಕೃತಿಕ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಕನ್ನಡಿಗರ ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್ ನ ಅಧ್ಯಕ್ಷ ಮಹಾದೇವ ಬಿರಾದಾರ ಮಾತನಾಡಿ ದಿ. 27ರಂದು ಅಥಣಿ ಪಟ್ಟಣದ ಆರ್‍ಎಚ್ ಕುಲಕರ್ಣಿ ಸಭಾಂಗಣದಲ್ಲಿ ಗಡಿನಾಡು ಸಂಸ್ಕೃತಿಕ ಸಂಭ್ರಮದಲ್ಲಿ ಶೆಟ್ಟರ ಮಠದ ಮರುಳುಸಿದ್ದ ಸ್ವಾಮೀಜಿ, ತುಂಗಳದ ಅನುಸೂಯಾ ಅಮ್ಮನವರು ಸಾನಿಧ್ಯ ವಹಿಸಲಿದ್ದಾರೆ. ಮುಂಜಾನೆ 9 ಗಂಟೆಗೆ ಶಿವಯೋಗಿ ವೃತ್ತದಿಂದ ನಾಡ ದೇವಿ ಭುವನೇಶ್ವರಿ ಪೂಜೆಯೊಂದಿಗೆ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ಜರುಗಲಿದೆ. ನಂತರ ನಡೆಯುವ ವೇದಿಕೆ ಕಾರ್ಯಕ್ರಮವನ್ನು ಡಿಸಿಎಂ ಲಕ್ಷ್ಮಣ ಸವದಿ ಉದ್ಘಾಟಿಸಲಿದ್ದಾರೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಅವರು ಗಡಿನಾಡ ಶಿರೋಮಣಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಶಾಸಕರಾದ ಮಹೇಶ ಕುಮಟಳ್ಳಿ, ಶ್ರೀಮಂತ ಪಾಟೀಲ ಸೇರಿದಂತೆ ಅನೇಕ ಗಣ್ಯರು, ಸಾಹಿತಿಗಳು, ಚಿಂತಕರು, ಸಮಾಜ ಸೇವಕರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಈ ವೇಳೆ ವಿಜಯ ಹುದ್ದಾರ, ದೇವೇಂದ್ರ ಬಿಸ್ವಾಗರ, ಉತ್ತಮ ಸಂಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು