26 ಗೃಹಲಕ್ಷ್ಮಿ ನೊಂದಣಿ ಸೇವಾ ಕೇಂದ್ರ ಪ್ರಾರಂಭ

ಕೋಲಾರ,ಜು.೩೦-ಕರ್ನಾಟಕ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ “ಗೃಹಲಕ್ಷ್ಮಿ ಯೋಜನೆ” ಯಡಿ ಫಲಾನುಭವಿಯ ನೋಂದಣಿ ಜುಲೈ ೨೦ರಿಂದ ಕೋಲಾರ ಜಿಲ್ಲೆಯಲ್ಲಿ ಆರಂಭಿಸಲಾಗಿದೆ. ಆದರೆ ನಗರ ಪ್ರದೇಶದ ಫಲಾನುಭವಿಗಳ ನೊಂದಣಿ ಬಹಳ ಕಡಿಮೆ ಇರುವುದರಿಂದ ಹೆಚ್ಚಿನ ನೊಂದಣಿ ಮಾಡಲು ಅನುಕೂಲವಾಗುವಂತೆ ಕೋಲಾರ ಜಿಲ್ಲೆಯ ನಗರ, ಪುರಸಭೆ,ಪಟ್ಟಣ ಪಂಚಾಯಿತಿಯ ವ್ಯಾಪ್ತಿಗಳಲ್ಲಿ ೨೬ ಗೃಹಲಕ್ಷ್ಮಿ ಯೋಜನೆ ನೊಂದಣಿ ಸೇವಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ನಗರ ಪ್ರದೇಶದಲ್ಲಿ ನಿಗದಿಪಡಿಸಿರುವ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅರ್ಹ ಇರುವ ಎಲ್ಲಾ ಫಲಾನುಭವಿಗಳು ನಿಮ್ಮ ಹತ್ತಿರದ ನೊಂದಣಿ ಸೇವಾ ಕೇಂದ್ರಗಳಲ್ಲಿ ನೊಂದಣಿ ಮಾಡಿಸಿಕೊಳ್ಳಲು ಜಿಲ್ಲಾಧಿಕಾರಿ ಅಕ್ರಂಪಾಷ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಯ ನೊಂದಣಿ ದಿನಾಂಕ:೨೦.೦೭.೨೦೨೩ ರಿಂದ ಆರಂಭಿಸಲಾಗಿದೆ. ಈಗಾಗಲೇ ತಿಳಿಸಿರುವಂತೆ ಪಡಿತರ ಚೀಟಿಯಲ್ಲಿ “ಯಜಮಾನಿ ಮಹಿಳೆ “ ಎಂದು ಗುರುತಿಸಿರುವ ಮಹಿಳೆಯು ಈ ಯೋಜನೆಯ ಫಲಾನುಭವಿಯಾಗಿರುತ್ತಾರೆ. ಆದರೆ ಫಲಾನುಭವಿ ಯಜಮಾನಿ ಮಹಿಳೆಯ ಅಥವಾ ಆಕೆಯ ಪತಿ ಆದಾಯ ತೆರಿಗೆ ಅಥವಾ ಜಿ.ಎಸ್.ಟಿ. ಪಾವತಿದಾರರಾಗಿರತಕ್ಕದಲ್ಲ. ಫಲಾನುಭವಿಯು ನೋಂದಣಿಯನ್ನು ೨ ವಿಧಾನದಿಂದ ಮಾಡಿಸಬಹುದಾಗಿದೆ.
ಮೊದಲನೇಯದಾಗಿ ಈಗಾಗಲೇ ರೇಷನ್ ಕಾರ್ಡ್ ನಲ್ಲಿ ಗುರುತಿಸಲಾಗಿರುವ ಪ್ರತಿಯೊಬ್ಬ ಯಜಮಾನಿ ಮಹಿಳೆಗೂ ದಿನಾಂಕ, ಸಮಯ ಹಾಗೂ ನೋಂದಾವಣೆ ಮಾಡಿಸುವ ಸ್ಥಳದ ವಿವರಗಳನ್ನು ಎಸ್.ಎಂ.ಎಸ್. ಮೂಲಕ ತಿಳಿಸಲಾಗುವುದು.
ಯೋಜನೆಯಡಿ ನೊಂದಾಯಿಸಿಕೊಳ್ಳಲು ಪಡಿತರ ಚೀಟಿ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ, ಪತಿಯ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯ ಪಾಸ್ ಬುಕ್ (ಆಧಾರ್ ನಂಬರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆ ಹೊರತುಪಡಿಸಿ, ಪರ್ಯಾಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಬಯಸಿದ್ದಲ್ಲಿ, ಸದರಿ ಬ್ಯಾಂಕ್ ಖಾತೆಯ ಪಾಸ್ ಬುಕ್) ಮಾಹಿತಿ ಅಗತ್ಯವಿರುತ್ತದೆ.