26ರಿಂದ 28 ರವರೆಗೆ ಪಾರಂಪರಿಕ ವೈದ್ಯರ ರಾಷ್ಟ್ರೀಯ ಮತ್ತು ರಾಜ್ಯ ಸಮ್ಮೇಳನ


ಸಂಜೆವಾಣಿ ವಾರ್ತೆ
ಹೊಸಪೇಟೆ ಅ22: ಇದೇ ಅ.26ರಿಂದ 28 ರವರೆಗೆ ಮೂರು ದಿನಗಳ ಕಾಲ ಪಾರಂಪರಿಕ ವೈದ್ಯರ ರಾಷ್ಟ್ರೀಯ ಮತ್ತು 14ನೇ ರಾಜ್ಯ ಸಮ್ಮೇಳನ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನಮಠದಲ್ಲಿ ನಡೆಯಲಿದೆ ಎಂದು ಪಾರಂಪರಿಕ ವೈದ್ಯ ಪರಿಷತ್ ವಿಜಯನಗರ ಜಿಲ್ಲಾ ಅಧ್ಯಕ್ಷ ಎಂ.ಸೂರಪ್ಪ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾರಂಪರಿಕ ವೈದ್ಯರ ರಾಷ್ಟ್ರೀಯ ಮತ್ತು 14ನೇ ರಾಜ್ಯ ಸಮ್ಮೇಳನ ವಿಶಿಷ್ಟತೆಯಿಂದ ಕೂಡಿದ್ದು, ಅನೇಕ ಮಹತ್ವದ ವಿಚಾರಗೋಷ್ಠಿಗಳು ನಡೆಯಲಿದೆ. ಇಲ್ಲಿ ಕೇವಲ ಪಾರಂಪರಿಕ ವೈದ್ಯರು ಮಾತ್ರವಲ್ಲದೇ, ಆಯುಷ್ ಅಧಿಕಾರಿಗಳು, ಪರಿಣಿತರು ಪಾಲ್ಗೊಳ್ಳಲಿದ್ದು, ವಿವಿಧ ಬಗೆಯ ಗಿಡಮೂಲಿಕೆಗಳು, ಔಷಧೀಯ ಸಸ್ಯಗಳು ನಮಗೆ ಪರಿಚಯವಾಗುವ ಜತೆಗೆ ಕಾಯಿಲೆಗಳಿಗೆ ಹೇಗೆ ಬಳಸಬಹುದು, ಗುಣಪಡಿಸಬಹುದು ಎಂಬ ಕುರಿತು ಮಾಹಿತಿಯೂ ಲಭ್ಯವಾಗಲಿದೆ ಎಂದರು.
ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ಹಾಗೂ ಶ್ರೀಪ್ರಸನ್ನನಾಥ ಸ್ವಾಮೀಜಿ ಉಪಸ್ಥಿತಿ ವಹಿಸಲಿದ್ದು, ಪಾರಂಪರಿಕ ವೈದ್ಯ ಪರಿಷತ್ ರಾಜ್ಯ ಅಧ್ಯಕ್ಷ ಜಿ.ಮಹದೇವಯ್ಯ ಅಧ್ಯಕ್ಷತೆ ವಹಿಸುವರು. ಆರೋಗ್ಯ ಸಚಿವ ದಿನೇಶ ಗುಂಡುರಾವ್ ಸಮ್ಮೇಳನ ಉದ್ಘಾಟಿಸಲಿದ್ದು, ಮಂಡ್ಯ ಜಿಲ್ಲೆ ಉಸ್ತುವಾರಿ ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿ 3 ಸಾವಿರ ಪಾರಂಪರಿಕ ವೈದ್ಯರ ಮಾಹಿತಿ ಕೋಶವನ್ನು ಬಿಡುಗಡೆಗೊಳಿಸಲಿದ್ದಾರೆ ಎಂದು ತಿಳಿಸಿದರು.
ಪಾರಂಪರಿಕ ವೈದ್ಯ ಪರಿಷತ್ ಕೂಡ್ಲಿಗಿ ತಾಲೂಕು ಅಧ್ಯಕ್ಷ ಡಿ.ಸೂರಣ್ಣ ಮಾತನಾಡಿ, ಸಮ್ಮೇಳನದಲ್ಲಿ ಹಿರಿಯರ ಆರು ಪಾರಂಪರಿಕ ವೈದ್ಯರಿಗೆ ‘ಪಾರಂಪರಿಕ ವೈದ್ಯ ರತ್ನ’ ಪ್ರಶಸ್ತಿ ನೀಡುತ್ತಿದ್ದು, ಪಂಚಲೋಹದ ಧ್ವನವಂತರಿ ವಿಗ್ರಹ ಜತೆ 10 ಸಾವಿರ ರೂ.ನಗದು ಕೊಟ್ಟು ಗೌರವಿಸಲಾಗುತ್ತಿದೆ. ಸಮ್ಮೇಳನದಲ್ಲಿ ವಿವಿಧ ಮಠಾಧೀಶರು, ಶಾಸಕರು, ಜೀವ ವೈವಿಧ್ಯ ಮಂಡಳಿ, ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ರಾಜ್ಯದ 2500 ಕ್ಕೂ ಹೆಚ್ಚು ಪಾರಂಪರಿಕ ವೈದ್ಯರು ಭಾಗವಹಿಸಲಿದ್ದಾರೆ ಎಂದರು.
ಪಾರಂಪರಿಕ ವೈದ್ಯರಾದ ವಿರೂಪಾಕ್ಷಯ್ಯಸ್ವಾಮಿ, ಐ.ಉಮೇಶ, ಮಹ್ಮದ್ ಸಾಹೇಬ್ ಮಾತನಾಡಿ, ಆದಿಚುಂಚನಗಿರಿ ಮಹಾ ಸಂಸ್ಥಾನಮಠ ಹಾಗೂ ಪಾರಂಪರಿಕ ವೈದ್ಯ ರಾಜ್ಯ ಪರಿಷತ್ ಸಹಭಾಗಿತ್ವದಲ್ಲಿ ಸಮ್ಮೇಳನ ಆಯೋಜಿಸಲಾಗಿದೆ. ಪಾರಂಪರಿಕ ವೈದ್ಯರ ಹಲವು ಬೇಡಿಕೆಗಳ ಮನವಿಯನ್ನು ಸಮ್ಮೇಳನದಲ್ಲಿ ಸಲ್ಲಿಸಲಾಗುತ್ತಿದ್ದು, ಸರ್ಕಾರ ಪಾರಂಪರಿಕ ವೈದ್ಯರಿಗೆ ಹಲವು ಸೌಲಭ್ಯಗಳನ್ನು ನೀಡಿ ಮುನ್ನೆಲೆಗೆ ತರಬೇಕು ಎಂದರು.
ಹೊಸಪೇಟೆ ಸಮೀಪದ ಪಾಪಿನಾಯಕನಹಳ್ಳಿ, ಸಂಡೂರಿನ ಯಶವಂತಪುರ ಸೇರಿದಂತೆ ಜಿಲ್ಲೆಯ ಆಸುಪಾಸಿನಲ್ಲಿ ಔಷಧಿಯುಕ್ತ ವನ ಸಂಪತ್ತು ಹೇರಳವಾಗಿದೆ. ಇದರ ಬಳಕೆಯ ಜತೆಜತೆಗೆ ಪೋಷಣೆಯ ಅಗತ್ಯವೂ ಇದೆ. ಮನುಷ್ಯನ ಗಂಭೀರ ಖಾಯಿಲೆಗಳಿಗೆ ದಿವ್ಯ ಔಷಧಿಗಳೇ ಆಗಿರುವ ಈ ಭಾಗದ ಅನೇಕ ಗಿಡ ಮೂಲಿಕೆಗಳು ನಶಿಸಿ ಹೋಗುತ್ತಿವೆ. ಅಲ್ಲದೇ, ನೈಸರ್ಗಿಕವಾಗಿ ಬೆಳೆಯುವ ಕೆಲ ಸಸ್ಯ, ಗಿಡ ಮೂಲಿಕೆಗಳನ್ನು ಬೇಕೆಂದಾಗ ತರಲಾಗುವುದಿಲ್ಲ. ಅದಕ್ಕೆ ಸಮಯ, ವಾರ, ತಿಥಿ ಮಿತಿಗಳಿದ್ದು, ಸರ್ಕಾರ ನಮಗೆ ಐಡಿ ಕಾರ್ಡ್ ಕೊಟ್ಟರೆ, ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಸಸ್ಯ, ಗಿಡ ಮೂಲಿಕೆಗಳ ಸಹಕಾರ ನಮಗೆ ಸಿಗುತ್ತದೆ.
ಚಂದ್ರೇಶೇಖರ್ ಪಾರಂಪರಿಕ ವೈದ್ಯ ಹೊಸಪೇಟೆ