ಬೀದರ್:ಜು.12: ಜಿಲ್ಲೆಯ ಔರಾದ್ ತಾಲ್ಲೂಕಿನ ಮಾಳೆಗಾಂವನಲ್ಲಿ ಒಟ್ಟು ಎಂಟು ಸಾವಿರ ಎಕರೆ ಪ್ರದೇಶದಲ್ಲಿ 2,500 ಮೆಗಾವಾಟ್ ಸಾಮಥ್ರ್ಯದ ಸೋಲಾರ್ ಪಾರ್ಕ್ ನಿರ್ಮಿಸಲಾಗುವುದು’ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದರು.
ವಿದ್ಯುತ್ ಘಟಕ ನಿರ್ಮಾಣ ಟೆಂಡರ್ ಹಂತದಲ್ಲಿದೆ. ಹಂತ-ಹಂತವಾಗಿ ಕೆಲಸ ಕೈಗೆತ್ತಿಕೊಳ್ಳಲಾಗುವುದು ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಈಗಾಗಲೇ ಹಲವು ರೈತರು ಜಮೀನು ಕೊಡಲು ಮುಂದೆ ಬಂದಿದ್ದಾರೆ. ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಸೋಲಾರ್ ಪಾರ್ಕ್ ವಿರುದ್ಧ ರೈತರನ್ನು ಎತ್ತಿ ಕಟ್ಟಿ ಅದಕ್ಕೆ ತಡೆಯೊಡ್ಡಬಾರದು. ಈ ಹಿಂದೆ ಔರಾದ್‍ನಲ್ಲಿ ?800 ಕೋಟಿ ವೆಚ್ಚದಲ್ಲಿ ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಕ್ಯಾಂಪ್ ಆರಂಭಿಸಲು ಯೋಜಿಸಲಾಗಿತ್ತು. ಆದರೆ, ಏಳು ವರ್ಷಗಳ ಹಿಂದೆ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಸಚಿವರಾಗಿದ್ದ ಈಶ್ವರ ಖಂಡ್ರೆಯವರು ಅದಕ್ಕೆ ಜಮೀನು ಕೊಟ್ಟಿರಲಿಲ್ಲ. ಇದರಿಂದಾಗಿ ಅದು ಬೇರೆ ರಾಜ್ಯಕ್ಕೆ ಮಂಜೂರಾಯಿತು’ ಎಂದು ದೂರಿದರು.