250 ದಿವ್ಯಾಂಗರಿಗೆ ಉಚಿತ ಕೃತಕ ಅಂಗಾಂಗ ಜೋಡಣೆ

ಬೆಂಗಳೂರು, ಅ,೧: ಸುಮಾರು ನಾಲ್ಕು ದಶಕಗಳಿಂದ ದಿವ್ಯಾಂಗರ ಶ್ರೇಯೋಭಿವೃದ್ಧಿಗಾಗಿ ತನ್ನನ್ನು ಸಮರ್ಪಿಸಿಕೊಂಡಿರುವ ರಾಜಸ್ಥಾನದ ನಾರಾಯಣ ಸೇವಾ ಸಂಸ್ಥಾನ ಪೊಲೀಯೋ, ಅಪಘಾತ ಮತ್ತಿತರ ಕಾರಣಗಳಿಂದ ದೈಹಿಕವಾಗಿ ನ್ಯೂನತೆಗೆ ಒಳಗಾಗಿರುವ ೨೫೦ ಕ್ಕೂ ಅಧಿಕ ದಿವ್ಯಾಂಗರಿಗೆ ಬುಲ್ ಟೆಂಪಲ್ ರಸ್ತೆಯ ಮರಾಠ ಹಾಸ್ಟಲ್ ಆವರಣದಲ್ಲಿ ಉಚಿತವಾಗಿ ಕೃತಕ ಅಂಗಾಂಗ ಜೋಡಣೆ ಮಾಡಲಾಯಿತು.
ಹತ್ತು ವರ್ಷದ ಮಗುನಿಂದ ಹಿಡಿದು ೭೦ ವರ್ಷದ ಹಿರಿಯ ನಾಗರಿಕರವರೆಗೆ ಯಶಸ್ವಿಯಾಗಿ ಅಂಗಾಂಗ ಜೋಡಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರಾಸ್ಥೆಟಿಕ್ ಧರಿಸಿ ನಡೆಯಲು ತರಬೇತಿ ನೀಡಲಾಯಿತು.
ಅಂಗವಿಕಲರು ತಮ್ಮ ನಡಿಗೆಯನ್ನು ಸುಧಾರಿಸಲು ಸಾಧ್ಯವಾಗುವ ಕನ್ನಡಿಯನ್ನು ಸಹ ಅಳವಡಿಸಲಾಗಿತ್ತು. ಪರಿಣಿತ ವೈದ್ಯರು ಹೊಸದಾಗಿ ಅಂಗಾಂಗ ಜೋಡಣೆ ಮಾಡಿಕೊಂಡವರಿಗೆ ಸುಗಮವಾಗಿ ನಡೆಯಲು ಅನುಕೂಲವಾಗುವಂತೆ ಸೂಕ್ತ ಮಾರ್ಗದರ್ಶನ ಮಾಡಿದರು.
ಕೃತಕ ಅಂಗಾಂಗ ಅಳವಡಿಸಿ ಕೊಂಡವರು ಸಂತಸದಿಂದ ಮರು ಜನ್ಮ ಪಡೆದವರಂತೆ ಸಂಭ್ರಮಿಸಿದರು. ಕೆಲವರು ತಜ್ಞರ ಮಾರ್ಗದರ್ಶನದಲ್ಲಿ ಫುಟ್ಬಾಲ್ ಆಡಿ ಹೊಸ ಜೀವನೋತ್ಸಾಹ ತುಂಬಿಕೊಂಡರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಾರಾಯಣ ಸೇವಾ ಸಂಸ್ಥಾನದ ಬೆಂಗಳೂರು ಶಾಖೆ ಅಧ್ಯಕ್ಷ ವಿನೋದ್ ಜೈನ್, ಈ ಮಾಡ್ಯುಲರ್ ಕೃತಕ ಅಂಗಗಳು ಜರ್ಮನ್ ತಂತ್ರಜ್ಞಾನ ಆಧಾರಿತವಾಗಿದ್ದು, ತೂಕದಲ್ಲಿ ಕಡಿಮೆ ಮತ್ತು ಹೆಚ್ಚಿನ ಗುಣಮಟ್ಟ ಹೊಂದಿವೆ ಎಂದರು.
ಕಾರ್ಯ್ರಕ್ರಮದಲ್ಲಿ ಬಿಪಿನ್ ರಾಮ್ ಜಿ ಅಗರ್ವಾಲ್, ರಮೇಶ್ ಸಂಖ್ಲಾ ಜಿ, ಡಾ. ಉತಮ್ ಜಿ ಖಿಚಾ ಮತ್ತಿತರರು ಉಪಸ್ಥಿತರಿದ್ದರು.