25, 26ರಂದು 44ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ: ಈಶ್ವರ್ ಖಂಡ್ರೆ

ಬೀದರ್:ನ.21: ಬಸವತತ್ವದ ಪ್ರಚಾರ, ಪ್ರಸಾರ ಹಾಗೂ ಸಮಾಜದ ಸಂಕಷ್ಟಗಳ ಕುರಿತುಂ ಚರ್ಚಿಸಲು ನ. 25, 26ರಂದು ಬಸವಕಲ್ಯಾಣದಲ್ಲಿ 44ನೇ ಶರಣ ಕಮ್ಮಟ ಹಾಗೂ ‘ಅನುಭವ ಮಂಟಪ ಉತ್ಸವ’ ಹಮ್ಮಿಕೊಳ್ಳಲಾಗಿದೆ’ ಎಂದು ಉತ್ಸವ ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಖಾತೆ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದರು.

ಸತತ 44 ವರ್ಷಗಳಿಂದ ಕಾರ್ಯಕ್ರಮ ಸಂಘಟಿಸುತ್ತ ಬರಲಾಗಿದೆ. ಲಿಂಗೈಕ್ಯ ಚನ್ನಬಸವ ಪಟ್ಟದ್ದೇವರ ಸದಾಶಯದಂತೆ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಕಾರ್ಯಕ್ರಮದಿಂದ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ರಚನೆಯಾಗಿದೆ. ಸ್ಮಾರಕಗಳ ಸಂರಕ್ಷಣೆಯಾಗಿದೆ. ಇದಕ್ಕೆ ಪೂರಕವಾಗಿ ಅನೇಕ ಕೆಲಸ, ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ನ. 25ರಂದು ಬೆಳಿಗ್ಗೆ 9.30ಕ್ಕೆ ಬಸವೇಶ್ವರರ ಪೂಜೆ, ವಚನ ಪಠಣ ಜರುಗಲಿದೆ. ಬೆಳಿಗ್ಗೆ 9.40ಕ್ಕೆ ಷಟಸ್ಥಲ ಧ್ವಜಾರೋಹಣವನ್ನು ಅನುಭವ ಮಂಟಪದ ಸಂಚಾಲಕ ವಿ. ಸಿದ್ದರಾಮಣ್ಣ ನೆರವೇರಿಸುವರು. ಬೆಳಿಗ್ಗೆ 11ಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಎರಡು ದಿನಗಳ ಕಾರ್ಯಕ್ರಮ ಉದ್ಘಾಟಿಸುವರು. ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸುವರು. ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಅವರಿಗೆ ‘ಡಾ. ಚನ್ನಬಸವ ಪಟ್ಟದ್ದೇವರು ಅನುಭವ ಮಂಟಪ ಪ್ರಶಸ್ತಿ, ಬಿ.ವಿ. ಶಿರೂರ ಅವರಿಗೆ ಡಾ.ಎಂ.ಎಂ. ಕಲಬುರಗಿ ಸಾಹಿತ್ಯ ಸಂಶೋಧನಾ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಾಹಿತಿ ಹಂಚಿಕೊಂಡರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಗ್ರಂಥ ಬಿಡುಗಡೆಗೊಳಿಸುವರು. ಮಧ್ಯಾಹ್ನ 3ಕ್ಕೆ ‘ಲಿಂಗಾಯತ ಸ್ವತಂತ್ರ ಧರ್ಮ; ಸಮಸ್ಯೆ; ಸವಾಲು ಹಾಗೂ ಪರಿಹಾರಗಳು’ ಕುರಿತ ಗೋಷ್ಠಿಯ ಸಾನ್ನಿಧ್ಯ ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ವಹಿಸುವರು. ಚಿಂತಕ ಜಿ.ಎಸ್. ಪಾಟೀಲ ಉಪನ್ಯಾಸ ನೀಡುವರು. ಸಂಜೆ 6ಕ್ಕೆ ‘ಮಹಾಕ್ರಾಂತಿ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ವಿವರಿಸಿದರು.

ನ. 26ರಂದು ಬೆಳಿಗ್ಗೆ 7.30ಕ್ಕೆ ಸಾಮೂಹಿಕ ಇಷ್ಟಲಿಂಗ ಪೂಜೆ ಜರುಗಲಿದೆ. ಬೆಳಿಗ್ಗೆ 10ಕ್ಕೆ ‘ಅನುಭವ ಮಂಟಪ ಮತ್ತು ಮಹಿಳಾ ಮೀಸಲಾತಿ’ ಕುರಿತ ಗೋಷ್ಠಿ ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿದೆ. ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಶಿವಗಂಗಾ ರುಮ್ಮಾ ಉಪನ್ಯಾಸ ನೀಡುವರು. ಇಸ್ರೊ ಅಧ್ಯಕ್ಷ ಎಸ್. ಸೋಮನಾಥ ಅವರಿಗೆ ಅನುಭವ ಮಂಟಪ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್. ಕಿರಣಕುಮಾರ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 3ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.

ಎರಡು ಕಡೆಗಳಿಂದ ಪಾದಯಾತ್ರೆ:

‘ಬಸವಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಉಳವಿಯಿಂದ ಹಾಗೂ ಬೆಳಗಾವಿಯಿಂದ ಒಂದು ಸಾವಿರ ಜನರು ಬಸವ ಭೂಮಿ ಪಾದಯಾತ್ರೆ ಕೈಗೊಂಡಿದ್ದು, ನ. 24ರಂದು ಸಂಜೆ ಬಸವಕಲ್ಯಾಣಕ್ಕೆ ತಲುಪುವರು. ಇದಲ್ಲದೇ ಮಹಾರಾಷ್ಟ್ರದ ವಿವಿಧ ಕಡೆಗಳಿಂದ ಭಕ್ತರು ಬರಲಿದ್ದಾರೆ. ಎಲ್ಲರಿಗೂ ವಸತಿ, ದಾಸೋಹದ ವ್ಯವಸ್ಥೆ ಮಾಡಲಾಗಿದೆ’ ಎಂದು ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ತಿಳಿಸಿದರು.

ಉತ್ಸವದ ಹಲವು ಕಾರ್ಯಕ್ರಮಗಳು ನ. 18ರಿಂದಲೇ ಆರಂಭಗೊಂಡಿವೆ. ವಚನ ಕಂಠಪಾಠ ಸ್ಪರ್ಧೆ ನಡೆಸಲಾಗಿದೆ. ಸಾಮೂಹಿಕ ವಚನ ಪಾರಾಯಣ ನಡೆಯುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬಸವ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

ಬಸವಕಲ್ಯಾಣದ ಶಾಸಕ ಶರಣು ಸಲಗರ, ಭಾಲ್ಕಿ ಮಠದ ಗುರುಬಸವ ಪಟ್ಟದ್ದೇವರು, ಲಿಂಗಾಯತ ಸಮಾಜದ ಮುಖಂಡರಾದ ಗುರುನಾಥ ಕೊಳ್ಳೂರ, ಜೈರಾಜ ಖಂಡ್ರೆ, ಬಾಬುವಾಲಿ, ಬಸವರಾಜ ಧನ್ನೂರ, ಶಶಿಧರ ಕೋಸಂಬೆ, ಶಕುಂತಲಾ ಬೆಲ್ದಾಳೆ ಹಾಜರಿದ್ದರು.

‘ಅನುಭವ ಮಂಟಪಕ್ಕೆ ಅನುದಾನದ ಕೊರತೆ ಇಲ್ಲ’

‘ಬಸವಕಲ್ಯಾಣದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಅನುಭವ ಮಂಟಪಕ್ಕೆ ಅನುದಾನದ ಕೊರತೆ ಇಲ್ಲ’ ಎಂದು ಸಚಿವ ಈಶ್ವರ ಬಿ. ಖಂಡ್ರೆ ಸ್ಪಷ್ಟಪಡಿಸಿದರು.

ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅನುಭವ ಮಂಟಪದ ವಿಚಾರದಲ್ಲಿ ರಾಜಕೀಯ ಹೇಳಿಕೆ, ರಾಜಕೀಯ ಬೆರೆಸುವುದು ಖಂಡನೀಯ. ಕೇಂದ್ರ ಸಚಿವ ಭಗವಂತ ಖೂಬಾ ಅವರು ಜನರನ್ನು ದಾರಿ ತಪ್ಪಿಸುವುದು ಬಿಡಬೇಕು. ಈಗಾಗಲೇ ?48 ಕೋಟಿ ಕಾಮಗಾರಿಯ ಬಿಲ್ ಪಾವತಿಸಲಾಗಿದೆ’ ಎಂದು ಹೇಳಿದರು.

ನಮ್ಮ ಸರ್ಕಾರದ ಅವಧಿಯಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ರೂಪುರೇಷೆ ತಯಾರಿಸಲಾಗಿತ್ತು. ಹಿಂದಿನ ಸರ್ಕಾರದ ಅವಧಿಯಲ್ಲಿ ಕಾಮಗಾರಿ ಆರಂಭವಾಗಿದೆ. ನಮ್ಮ ಸರ್ಕಾರದಿಂದ ಅನುದಾನದ ಕೊರತೆ ಆಗದಂತೆ ಕ್ರಮ ಜರುಗಿಸಲಾಗಿದೆ. ನಾನು ಸಚಿವನಾದ ನಂತರ ಹಲವು ಸಲ ಕಾಮಗಾರಿ ಸ್ಥಳಕ್ಕೆ ಭೇಟಿ ಕೊಟ್ಟಿದ್ದೇನೆ. ನಿಗದಿತ ಅವಧಿಯಲ್ಲಿ ಕೆಲಸ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.