25 ಲಕ್ಷ ರೂ. ಪರಿಹಾರಕ್ಕೆ ಶಾಂತಕುಮಾರ್ ಆಗ್ರಹ

ಕಲಬುರಗಿ: ನ 23 ರೈತರ ಹೋರಾಟದಲ್ಲಿ ಮಡಿದ ರೈತ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರ ನೀಡುವಂತೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರಾಣ ತೆತ್ತ ರೈತರ ಕುಟುಂಬಗಳಿಗೆ ತೆಲಂಗಾಣ ಸರ್ಕಾರ 3 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಕೇಂದ್ರ ಸರ್ಕಾರ ಪ್ರತಿ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದೇನೆ ಎಂದರು.
ರೈತರ ತೊಂದರೆಗಳನ್ನು ಪರಿಹರಿಸುವುದು ಜಿಲ್ಲಾಧಿಕಾರಿಗಳ ಕರ್ತವ್ಯವಾಗಿದೆ. ಕೆಲ ದಿನಗಳ ಹಿಂದೆ ಧರಣಿ ನಡೆಸಿ ಹೋದಂತಹ ರೈತರ ಮನವಿಯನ್ನು ಸ್ವೀಕರಿಸಿಲ್ಲ. ಕೂಡಲೇ ಸಭೆ ಕರೆದು ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸದೆ ಹೋದರೆ ಇದೇ ತಿಂಗಳು 26ರಂದು ರಾಜ್ಯಾದ್ಯಂತ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದರು.
ರಾಜ್ಯದಲ್ಲಿ 7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ಮೆಕ್ಕೆಜೋಳ, ತೋಟಗಾರಿಕೆ ಬೆಳೆಗಳು ಹಾಳಾಗಿವೆ ಎಂದು ಅಂದಾಜಿಸಲಾಗಿದೆ. ಮಳೆ ಹಾನಿ, ಪ್ರವಾಹ ಹಾನಿ, ಅತಿವೃಷ್ಟಿ ಬಗ್ಗೆ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ ಅವರು, ರೈತರ ಸಾಲಮನ್ನಾ ಮಾಡುವಂತೆ ಮನವಿ ಮಾಡಿದರು.