25 ಲಕ್ಷ ಪರಿಹಾರಕ್ಕೆ ಶಾಂತಕುಮಾರ್ ಆಗ್ರಹ

ಸಂಜೆವಾಣಿ ವಾರ್ತೆ
ಟಿ.ನರಸೀಪುರ: ಜು.17:- ಹತ್ಯೆಯಾದ ಹಿಂದೂ ಕಾರ್ಯಕರ್ತ ವೇಣುಗೋಪಾಲ್ ಕುಟುಂಬ ವರ್ಗಕ್ಕೆ ಸರ್ಕಾರ 25ಲಕ್ಷ ರೂಗಳ ತುರ್ತು ಪರಿಹಾರ ಘೋಷಣೆ ಮಾಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.
ಪಟ್ಟಣದ ಕಳೆದ ವಾರ ಹತ್ಯೆಯಾದ ಸಂತ್ರಸ್ತನ ಮನೆಗೆ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದ ನಂತರ ಕಬಿನಿ ಅತಿಥಿ ಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಸರ್ಕಾರ ರಾಜಕಾರಣ ಬದಿಗಿಟ್ಟು ಮಾನವೀಯತೆ ನೆಲೆಗಟ್ಟಿನಲ್ಲಿ ತುರ್ತು ಪರಿಹಾರ ಘೋಷಣೆ ಮಾಡಿ ಮುಖ್ಯಸ್ಥರಿಲ್ಲದ ಮನೆಗೆ ಆಸರೆಯಾಗಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ವೇಣುಗೋಪಾಲ್ ಹತ್ಯೆಯ ಸಮಗ್ರ ತನಿಖೆಯನ್ನು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನಡೆಸಿ ಸತ್ಯಾಸತ್ಯತೆ ಹೊರತಂದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಈ ಹತ್ಯೆಯ ಹಿನ್ನೆಲೆಯಲ್ಲಿ ಟಿ.ನರಸೀಪುರದ ಜನತೆಯಲ್ಲಿ ಗೊಂದಲ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಇದನ್ನು ತಿಳಿಗೊಳಿಸಲು ಜಿಲ್ಲಾ ಪೆÇಲೀಸ್ ವರಿಷ್ಠ ಅಧಿಕಾರಿಗಳ ನೇತೃತ್ವದಲ್ಲಿ ಸರ್ವ ಜನಾಂಗದ ಶಾಂತಿ ಸಭೆಯನ್ನು ನಡೆಸಿ ಧಾರ್ಮಿಕ ಸಾಮರಸ್ಯ ಮೂಡಿಸಲು ಪ್ರಯತ್ನಿಸಬೇಕು ಎಂದರು.
ಬಣ್ಣಾರಿ ಸಕ್ಕರೆ ಕಾರ್ಖಾನೆ ಕಳೆದ ವರ್ಷದ ಕಬ್ಬಿನ ಹೆಚ್ಚುವರಿ ಹಣ 150ರೂಗಳನ್ನು ರೈತರಿಗೆ ಖಾತೆಗೆ ಶೀಘ್ರ ಪಾವತಿಸಬೇಕು. ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರ ನಿಗದಿ ಮಾಡಿರುವ ಕಬ್ಬಿನ ಎಫ್.ಆರ್.ಪಿ ದರದಿಂದ ರೈತರಿಗೆ ಅನ್ಯಾಯವಾಗಿದೆ.10.2% ಬದಲು 9.5% ಸಕ್ಕರೆ ಇಳುವರಿ ನೀಡುವ ಪ್ರತಿ ಟನ್ ಕಬ್ಬಿಗೆ 4000ರೂ ದರ ನಿಗದಿ ಮಾಡಿ ರೈತರಿಗೆ ಪಾವತಿಸಬೇಕು. ರಾಜ್ಯ ಸರ್ಕಾರ ಎಸ್.ಎ.ಪಿ ಕಾಯ್ದೆ ಪ್ರಕಾರ ಕಬ್ಬಿಗೆ ಹೆಚ್ಚುವರಿ ದರ ನಿಗದಿ ಮಾಡಿ ರಾಜ್ಯದ 30 ಲಕ್ಷ ಕಬ್ಬು ಬೆಳೆಗಾರರನ್ನು ರಕ್ಷಣೆ ಮಾಡಬೇಕು.ಇದನ್ನು ಕಬ್ಬಿನ ವೆಚ್ಚಾಧಾರಿತ ದರ ಎಂದು ನಿಗದಿಪಡಿಸಲು ಕ್ರಮಕೈಗೊಳ್ಳಬೇಕು.
ಈ ಬಗ್ಗೆ ಜಿಲ್ಲಾಧಿಕಾರಿಗಳು ತುರ್ತು ಕ್ರಮಕೈಗೊಳ್ಳುವಂತೆ ಒತ್ತಾಯಿಸಲು ಇದೇ 18ರಂದು ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಮೈಸೂರು ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ಒತ್ತಾಯಿಸಲಾಗುವುದು ಎಂದರು.
ಸಂದರ್ಭದಲ್ಲಿ ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಸಿದ್ದೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್, ಪ್ರಸಾದ್ ನಾಯ್ಕ, ಅಪ್ಪಣ್ಣ, ರಂಗರಾಜು ರಾಜೇಶ, ಪರಶಿವಮೂರ್ತಿ, ಕುರುಬೂರು ಪ್ರದೀಪ್, ಗೌರಿಶಂಕರ್, ತರಕಾರಿ ನಿಂಗರಾಜು, ಸೋಮಶೇಖರ್,ನಾಗೇಂದ್ರ ಹ್ಯಾಕನೂರು,
ವಾಚ್ ಕುಮಾರ್, ಗಿರೀಶ್ ಜಾಲಹಳ್ಳಿ, ರಾಜೇಶ್, ಉಮೇಶ ಕರೋಹಟ್ಟಿ, ಕೆ.ಜಿ.ಗುರುಸ್ವಾಮಿ, ನಂಜುಂಡಸ್ವಾಮಿ
ಆದಿಬೆಟ್ಟಳ್ಳಿ,ಮಹದೇವ ಪ್ರಸಾದ್ ನಿಲಸೋಗೆ, ಹಲವು ರೈತ ಮುಖಂಡರು ಭಾಗವಹಿಸಿದ್ದರು.