25 ಕೆಜಿ ಗಾಂಜಾ ಜಪ್ತಿ ಇಬ್ಬರ ಸೆರೆ

ಬೆಂಗಳೂರು,ಮಾ.೨೯- ಪ್ರತಿಷ್ಠಿತ ಕಾಲೇಜಿನ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಡ್ರಗ್ ಪ್ಲೆಡರ್‌ಗಳನ್ನು ಬಂಧಿಸಿ ಬರೋಬ್ಬರಿ ೧೫ ಲಕ್ಷ ಮೌಲ್ಯದ ೨೫ ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಆನೇಕಲ್ ಪೋಲೀಸರು ಯಶಸ್ವಿಯಾಗಿದ್ದಾರೆ.
ಆನೇಕಲ್‌ನ ಸೋಮಶೇಖರ್ ಹಾಗೂ ರಾಘವೇಂದ್ರ ಬಂಧಿತ ಆರೋಪಿಗಳಾಗಿದ್ದು, ಇವರಿಬ್ಬರೂ ಹೆಚ್ಚು ಹಣ ಸಂಪಾದನೆ ಮಾಡಬೇಕೆನ್ನುವ ದುರುದ್ದೇಶದಿಂದ ರಾಜ್ಯ ಹಾಗೂ ಹೊರರಾಜ್ಯಗಳಿಂದ ಗಾಂಜಾ ತಂದು ಸಣ್ಣ ಸಣ್ಣ ಪ್ಯಾಕೆಟ್‌ಗಳನ್ನಾಗಿ ಮಾಡಿ ಪ್ರತಿಷ್ಠಿತ ಅಲಯನ್ಸ್ ಕಾಲೇಜಿನ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದರು. ಕಾಲೇಜು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಕಲೆಹಾಕಿದ ಆನೇಕಲ್ ಪೋಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆನೇಕಲ್ ಪಟ್ಟಣದ ಅಯೋಧ್ಯೆ ನಗರದ ಮನೆಯೊಂದರಲ್ಲಿ ಗಾಂಜಾ ಸಂಗ್ರಹ ಮಾಡಿರುವುದು ತಿಳಿಯುತ್ತಿದ್ದಂತೆ ಆನೇಕಲ್ ತಹಶೀಲ್ದಾರ್ ಶಿವಪ್ಪ ಲಮಾಣಿ ನೇತೃತ್ವದಲ್ಲಿ ಪೋಲೀಸರು ಮನೆ ಪರಿಶೀಲನೆ ನಡೆಸಿದ ವೇಳೆ ೧೫ ಲಕ್ಷ ಮೌಲ್ಯದ ೨೫ ಕೆಜಿ ಗಾಂಜಾ ಪತ್ತೆಯಾಗಿದೆ.
ಗಾಂಜಾ ವಶಕ್ಕೆ ಪಡೆದ ಆರೋಪಿಗಳ ವಿರುದ್ಧ ಆನೇಕಲ್ ಪೊಲೀಸರು ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳನ್ನು ಜೈಲಿಗೆ ಕಳುಹಿಸಿದ್ದಾರೆ.