25ರಿಂದ ರಂಭಾಪುರಿ ಜಗದ್ಗುರುಗಳಿಂದ ಇಷ್ಟಲಿಂಗ ಮಹಾಪೂಜೆ: ತಮಲೂರು ಶ್ರೀಗಳು

ಬೀದರ್: ಜು.22:ಈ ತಿಂಗಳ 25ರಿಂದ 27ರ ವರೆಗೆ ಬೀದರ್-ಭಾಲ್ಕಿ ರಸ್ತೆಯಲ್ಲಿರುವ ಪಂಚಾಚಾರ್ಯ ಪುಣ್ಯಾಶ್ರಮದಲ್ಲಿ ಅಲ್ಲಿನ ಶ್ರೀ ರೇಣುಕಾಚಾರ್ಯ ಮಂದಿರ ಹಾಗೂ ಶ್ರೀ ಜಗದ್ಗುರು ಪಂಚಾಚಾರ್ಯ ಏಜ್ಯುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಧಿಕ ಶ್ರಾವಣ ಮಾಸ ಪ್ರಯುಕ್ತ ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣೂಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಭಗವತ್ಪಾದ ಶಿವಾಚಾರ್ಯರು ಬಾಳೆ ಹೊನ್ನೂರು ಇವರಿಂದ ಮೂರು ದಿವಸಗಳ ಕಾಲ ನಿತ್ಯ ಇಷ್ಟಲಿಂಗ ಮಹಾಪೂಜೆ, ಧರ್ಮೋಪದೇಶ ಹಾಗೂ ಗಣ್ಯರಿಂದ ವೇದಿಕೆ ಕಾರ್ಯಕ್ರಮ ಜರುಗಲಿದೆ ಎಂದು ತಮಲೂರು ಶ್ರೀಮಠದ ಪೂಜ್ಯ ಶಿವಾನಂದ ಮಹಾಸ್ವಾಮಿಗಳವರು ವಿವರಿಸಿದರು.

ಶುಕ್ರವಾರ ಪಂಚಾಚಾರ್ಯ ಪುಣ್ಯಾಶ್ರಮದಲ್ಲಿ ಪತ್ರಿಕಾ ಗೋಷ್ಟಿ ಉದ್ದೇಶಿಸಿ ಮಾತನಾಡಿದ ಪೂಜ್ಯರು, ಚಿಕ್ಕಮಂಗಳೂರು ಜಿಲ್ಲೆಯಲ್ಲಿರುವ ದಟ್ಟ ಅರಣ್ಯದಲ್ಲಿನ ರಮಭಾಪುರಿ ಪೀಠಕ್ಕೆ ತೆರಳಿ ಜಗದ್ಗುರುಗಳ ದರುಶನ ಪಡೆಯುವುದು ಅಸಾಧ್ಯ. ಆದ್ದರಿಂದ ಜಗದ್ಗುರುಗಳು ಇಲ್ಲಿಯ ದಯಮಾಡಿಸಿ ಒಂದಲ್ಲ, ಎರಡಲ್ಲ, ಬರೋಬ್ಬರಿ ಮೂರು ದಿವಸಗಳ ಕಾಲ ಇಲ್ಲಿಯ ಉಳಿದು ಭಕ್ತರನ್ನು ಉದ್ದರಿಸುವರು ಎಂದರು.

ನಿತ್ಯ ಬೆಳಿಗ್ಗೆ ಶ್ರೀ ರೇಣುಕಾಚಾರ್ಯರಿಗೆ ಮಹಾ ಮಸ್ತಾಭಿಷಕ, ಶ್ರೀ ರುದ್ರಾಭಿಷಕ ಹಾಗೂ ಇಷ್ಟಲಿಂಗ ಮಹಾಪೂಜೆ ನೆರವೇರುವುದು.

25ರಂದು ಶ್ರೀ ರೇಣುಕ ಮಾಹೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ಅಡಳಿತ ಮಂಡಳಿಯ ಸಹಕಾರದೊಂದಿಗೆ ಸುಮಾರು 50 ಜನ ಜಂಗಮರ ಮಕ್ಕಳಿಗೆ ಸಾಮೂಹಿಕ ಅಯ್ಯಾಚಾರ, ಭಕ್ತರ ಮಕ್ಕಳಿಗೆ ಲಿಂಗದೀಕ್ಷೆ ಜರುಗುವುದು. ನಂತರ ಧರ್ಮ ಸಭೆ, ತದನಂತರ ಜಿಲ್ಲೆಯ ಜನಪ್ರತಿನಿಧಿಗಳು, ಮಾಜಿ ಸಚಿವರು ಹಾಗೂ ಶಾಸಕರು ಹಾಗೂ ಶ್ರೀಮಠದ ದಾನಿಗಳನ್ನೊಳಗೊಂಡ ಗಣ್ಯರಿಂದ ವೇದಿಕೆ ಕಾರ್ಯಕ್ರಮ ಜರುಗಲಿದೆ.

24 ಹಾಗೂ 25ರಂದು ‘ಕ್ಯಾನ್ಸರ್‍ಗೆ ಅನ್ಸರ್’ ಎಂಬ ಪುಸ್ತಕ ಬರೆದ ಬೆಂಗಳೂರಿನ ಖ್ಯಾತ ಕ್ಯಾನ್ಸರ್ ರೋಗ ತಜ್ಞರಾದ ಡಾ.ರಮೇಶ ಅವರು ಪುಣ್ಯಾಶ್ರಮದಲ್ಲಿ ಎರಡು ದಿವಸಗಳ ಕಾಲ ಉಚಿತ ಕ್ಯಾನ್ಸರ್ ತಪಾಸಣೆ ಶಿಬಿರ ನಡೆಸುವರು.

26 ಹಾಗೂ 27ರಂದು ಸಹ ಇಷ್ಟಲಿಂಗ ಮಹಾಪೂಜೆ, ಜಗದ್ಗುರುಗಳ ಪಾದ ಪೂಜೆ, ಧರ್ಮೋಪದೇಶ, ವೇದಿಕೆ ಕಾರ್ಯಕ್ರಮ, ಪೂಣ್ಯಾಶ್ರಮದ ದಾನಿಗಳಿಗೆ ಮೂರು ದಿನಗಳ ಕಾಲ ಗುರು ರಕ್ಷೆ ಕಾರ್ಯಕ್ರಮ ಜರುಗುವುದು.

25ರಂದು ಕೇಂದ್ರ ಸಚಿವ ಭಗವಂತ ಖೂಬಾ ಸಮಾರಂಭ ಉದ್ಘಾಟಿಸಿದರೆ, 27ರಂದು ಸಮಾರೋಪ ಕಾರ್ಯಕ್ರಮದಲ್ಲಿ ನೂತನ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಪೌರಾಡಳಿತ ಸಚಿವ ರಹಿಮ್ ಖಾನ್ ಸೇರಿದಂತೆ ಮಾಜಿ ಸಚಿವರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಉಪಸ್ಥಿತರಿರುವರು. ಮೂರು ದಿನಗಳ ಕಾಲ ರಾಜೇಶ್ವರ ಶಿವಾಚಾರ್ಯರು, ವೀರುಪಾಕ್ಷ ಶಿವಾಚಾರ್ಯರು, ಲಾಡಗೇರಿ ಶ್ರೀಗಳು ಸೇರಿದಂತೆ ಜಿಲ್ಲೆಯ ಅನೇಕ ಮಠಾಧೀಶರು ಭಾಗವಹಿಸುವರು. ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ಡಾ.ಬಲಬೀರಸಿಂಗ್ ಹಾಗೂ ಡಾ.ಅಬ್ದುಲ್ ಖದೀರ್ ಕಾರ್ಯಕ್ರಮದಲ್ಲಿ ಭಾಗಿಯಾಗುವರು.

ಇದೇ ವೇಳೆ ಶಾಶ್ವತ ದಾಸೋಹಿಗಳಾದ ಡಾ.ಚನ್ನಬಸಪ್ಪ ಹಾಲಹಳ್ಳಿ, ಮಂದಿರದ ಜೀರ್ಣೋದ್ದಾರಕ್ಕೆ ದಾನಿಗಳಾದ ಡಾ.ಗುರಮ್ಮ ಸಿದ್ದಾರೆಡ್ಡಿ ಹಾಗೂ ಇನ್ನೋರ್ವ ಶಾಶ್ವತ ದಾಸೋಹಿ ಡಾ.ಚಂದ್ರಕಾಂತ ಗುದಗೆ ಅವರಿಗೆ ಈ ಸಂದರ್ಭದಲ್ಲಿ ವಿಶೇಷ ಸನ್ಮಾನ ಜರುಗುವುದು.

ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಜಿಲ್ಲೆಯ ಸಹಸ್ರಾರು ಭಕ್ತಾದಿಗಳು ಆಗಮಿಸಿ ಜಗದ್ಗುರುಗಳ ದರುಶನ ಪಡೆದು ಪುನಿತರಾಗಬೇಕೆಂದು ತಮಲೂರು ಶ್ರೀಗಳು ನುಡಿದರು. ಅಖಿಲ ಭಾರತೀಯ ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷ ವೈಜಿನಾಥ ಕಮಠಾಣೆ ಹಾಗೂ ಶ್ರೀ ರೇಣುಕಾಚಾರ್ಯ ಮಂದಿರ ಹಾಗೂ ಶ್ರೀ ಜಗದ್ಗುರು ಪಂಚಾಚಾರ್ಯ ಏಜ್ಯುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವೇದಮೂರ್ತಿ ಷಣ್ಮುಖಯ್ಯ ಸ್ವಾಮಿ, ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಖಜಾಂಚಿ ಶ್ರೀಕಾಂತ ಸ್ವಾಮಿ ಸೋಲಪುರ, ನಿರ್ದೇಶಕ ಕಾರ್ತಿಕ ಮಠಪತಿ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.