25ರಂದು ಗಡಿನಾಡು ಕನ್ನಡ ಉತ್ಸವ

ಅಥಣಿ:ನ.23: ಪ್ರತಿಯೊಬ್ಬ ಸ್ವಾಭಿಮಾನಿ ಕನ್ನಡಿಗರು ಕನ್ನಡ ಭಾಷೆಯನ್ನು ನಿತ್ಯ ಬದುಕಿನಲ್ಲಿ ಬಳಕೆ ಮಾಡುವ ಮೂಲಕ ಭಾಷೆಯನ್ನ ಇನ್ನಷ್ಟು ಗಟ್ಟಿಯಾಗಿ ಬೆಳೆಸಬೇಕು. ನಾಡು, ನುಡಿ ಕಲೆ ಸಂಸ್ಕøತಿಯ ಬೆಳವಣಿಗೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಉದ್ಯಮಿ ರಾಘವೇಂದ್ರ ಶೆಟ್ಟ ಹೇಳಿದರು.
ಅವರು ಅಥಣಿ ಪಟ್ಟಣದ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಕಾರ್ಯಾಲಯದಲ್ಲಿ ಗಡಿನಾಡು ಕನ್ನಡ ಉತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಗಡಿ ಭಾಗದಲ್ಲಿ ಕನ್ನಡ ಪರ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಕನ್ನಡಿಗರಲ್ಲಿ ಮತ್ತು ಸರಕಾರಕ್ಕೆ ಜಾಗೃತಿ ಉಂಟು ಮಾಡುತ್ತಿರುವ ಕನ್ನಡಪರ ಸಂಘಟನೆಗಳ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಕರವೇ ತಾಲೂಕ ಅಧ್ಯಕ್ಷ ಅಣ್ಣಾಸಾಬ ತೆಲಸಂಗ ಮಾತನಾಡಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ವತಿಯಿಂದ ಬರುವ ಶುಕ್ರವಾರ ದಿ. 25 ರಂದು ಸಾಯಂಕಾಲ 5 ಗಂಟೆಗೆ ಗಡಿನಾಡು ಕನ್ನಡ ಉತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕರವೇ ಸಂಘಟನೆಯ ರಜತ ಮಹೋತ್ಸವ, ಗಡಿನಾಡು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ, ಇತ್ತೀಚಿಗೆ ನಡೆದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಕನ್ನಡ ರಸಮಂಜರಿ ಕಾರ್ಯಕ್ರಮಗಳು ಜರುಗಲಿವೆ. ಈ ಕಾರ್ಯಕ್ರಮದಲ್ಲಿ ಸೆಟ್ಟರ ಮಠದ ಮರುಳು ಸಿದ್ದ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಪ್ರಾಂತ ಸಹ ಸಂಚಾಲಕರಾದ ಅರವಿಂದ ರಾವ್ ದೇಶಪಾಂಡೆ ಉದ್ಘಾಟಕರಾಗಿ, ಮುಖ್ಯ ಅತಿಥಿಗಳಾಗಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಶಾಸಕ ಮಹೇಶ ಕುಮಟಳ್ಳಿ ಆಗಮಿಸಲಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ. ಬಾಳಾಸಾಹೇಬ ಲೋಕಾಪುರ ಗಡಿನಾಡು ಕನ್ನಡ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಚಿತ್ರನಟ ಹಾಗೂ ಕರವೇ ಜಿಲ್ಲಾಧ್ಯಕ್ಷ ಆರ್ ಅಭಿಲಾಷ್ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಮುಖಂಡರಾದ ಸದಾಶಿವ ಬುಟಾಳಿ, ಕೆ ಎಲ್ ಕುಂದರಗಿ, ರಾವಸಾಹೇಬ ಐಹೊಳೆ, ತಹಸಿಲ್ದಾರ ಸುರೇಶ ಮುಂಜೆ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಸೇರಿದಂತೆ ಅನೇಕ ಗಣ್ಯರು, ಕನ್ನಡ ಅಭಿಮಾನಿಗಳು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕನ್ನಡದ ಮನಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕನ್ನಡ ಉತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಈ ವೇಳೆ ಜಗನ್ನಾಥ ಬಾಮನೆ, ಉದಯ ಮಾಕಾಣಿ, ಶಂಕರ ಮಗದುಮ್ಮ, ಸಿದ್ದು ಹಂಡಗಿ, ಕುಮಾರ ಬಡಿಗೇರ, ಸತೀಶ ಯಲ್ಲಟ್ಟಿ, ರಾಜು ವಾಘಮೋರೆ, ವಿಜಯ ಹುದ್ದಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.