25ಕೋಟಿ ರೂ. ಅನುದಾನ ಪ್ರಸ್ತಾವನೆಗೆ ಶಾಸಕ ಅಬ್ಬಯ್ಯ ಸೂಚನೆ

ಹುಬ್ಬಳ್ಳಿ,ಜ22: ಪೂರ್ವ ವಿಧಾನಸಭಾ ಕ್ಷೇತ್ರದ ಒಟ್ಟು 23ವಾರ್ಡ್ಗಳಲ್ಲಿ ತಲೆದೂರಿರುವ ಮೂಲ ಸೌಕರ್ಯಗಳ ಅಬಿವೃದ್ಧಿಗೆ ತುರ್ತಾಗಿ 25ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಸರ್ಕಾರಕ್ಕೆ ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅಧಿಕಾರಿಗಳಿಗೆ ಸೂಚಿಸಿದರು.
ಅವರು, ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿ ಕುರಿತು ಗೃಹ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಅಗತ್ಯ ಸೂಚನೆ ನೀಡಿದರು.
ಇಲ್ಲಿನ ನ್ಯೂ ಇಂಗ್ಲಿಷ್ ಸ್ಕೂಲ್ ಮೇದಾರ ಓಣಿ ಬಳಿ ಇರುವ ಮಟನ್ ಮಾರುಕಟ್ಟೆಯನ್ನು ನೆಲಸಮ ಗೊಳಿಸಿ 5ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಮಟನ್ ಮಾರುಕಟ್ಟೆ ನಿರ್ಮಾಣ ಮಾಡುವುದು, 5 ಕೋಟಿ ರೂ. ವೆಚ್ಚದಲ್ಲಿ ಸಿಸಿಟಿವಿ ಕಣ್ಗಾವಲು, ಮಂಟೂರು ರಸ್ತೆ ಹರಿಶ್ಚಂದ್ರ ಸ್ಮಶಾನ ಬಳಿ 2ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣ ಸೇರಿದಂತೆ ಶಾಲೆಗಳ ಅಭಿವೃದ್ಧಿಗೆ, ಅಂಗನವಾಡಿ ನಿರ್ಮಾಣ, ಕುಡಿಯುವ ನೀರು ಸರಬರಾಜು, ಒಳಚರಂಡಿ ಹೀಗೆ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ತುರ್ತಾಗಿ 25ಕೋಟಿ ರೂ. ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಅನುದಾನ ಬಿಡಗಡೆ ಮಾಡಿಸಲಾಗುವುದು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಅಧಿಕಾರಿಗಳ ವಿರುದ್ಧ ಪ್ರಸಾದ ಅಬ್ಬಯ್ಯ ಗರಂ
ಪ್ರತಿಬಾರಿಯೂ ಸಭೆಯಲ್ಲಿ ಹೇಳಿದ ವಿಷಯಗಳನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕಳೆದ ಬಾರಿ ಸಭೆಯಲ್ಲಿ ಹೇಳಿದ ವಿಷಯಗಳು ಮತ್ತು ಚರ್ಚೆಗಳನ್ನು ಮರೆತಂತೆ ಕಾಣಿಸುತ್ತಿದೆ. ಪ್ರತಿಬಾರಿಯೂ ಹೇಳಿದ ವಿಷಯವನ್ನೇ ಪುನರಾವರ್ತನೆಯಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು. ಸಭೆಯಲ್ಲಿ ನೀಡಿದ ಸೂಚನೆಗಳನ್ನು ಚಾಚು ತಪ್ಪದೆ ಪಾಲಿಸಿ, ವರದಿ ಒಪ್ಪಿಸಬೇಕು. ಅಂದಾಗ ಮಾತ್ರ ತಮ್ಮ ಕಾರ್ಯಗಳು ಜನರಿಗೆ ತಲುಪುತ್ತವೆ. ಕ್ಷೇತ್ರದ ಸಮಸ್ಯೆಗಳು ಸಹ ಬಗೆಹರಿಯುತ್ತವೆ ಎಂದರು ಹೇಳಿದರು.
ಮಹಾನಗರ ಪಾಲಿಕೆ ಕಾನೂನು ಸಲಹೆ ವಿಭಾಗ ತುಂಬ ಬಲಹೀನವಾದಂತಿದೆ. ಈ ಹಿಂದೆ ಹತ್ತಾರು ಬಾರಿ ಸೂಚನೆ ನೀಡಿದರೂ ಯಾವುದೆ ಕ್ರಮವಾಗುತ್ತಿಲ್ಲ. ಪಾಲಿಕೆ ಆಸ್ತಿಗಳನ್ನು ಬೇಕಾಬಿಟ್ಟಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಪಾಲಿಕೆ ಆಸ್ತಿಗಳನ್ನು ನಿಯಮಾನುಸಾರ ಬಳಕೆ ಮಾಡದೇ ದುರುಪಯೋಗ ಮಾಡಿಕೊಳ್ಳುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಬೇಕು. ಪಾಲಿಕೆ ಆಸ್ತಿಗಳನ್ನು ಉಳಿಸುವ ಕಾರ್ಯವಾಗಲಿ ಎಂದು ಶಾಸಕರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಅಧೀಕ್ಷಕ ಅಭಿಯಂತರರಾದ ಬಿ.ತಿಮ್ಮಪ್ಪ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ವಿಜಯ್‍ಕುಮಾರ್, ಸಹಾಯಕ ವಲಯ ಆಯುಕ್ತರಾದ ಬಸವರಾಜ ಲಮಾಣಿ, ಮನೋಜ್ ಗಿರೀಶ್, ಫಕೀರಪ್ಪ ಇಂಗಳಗಿ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.