ಜೈಪುರ,ಜು.೯- ವರ್ಷಾಂತ್ಯದಲ್ಲಿ ನಡೆಯಲಿರುವ ರಾಜಸ್ತಾನ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಯಲ್ಲಿ ಜನ ಮನ ಗೆಲ್ಲಲ್ಲು ಕಸರತ್ತು ನಡೆಸಿದ್ದಾರೆ.
ರಾಜಸ್ತಾನ ಚುನಾವಣೆ ಹಿನ್ನೆಲೆಯಲ್ಲಿ ಇಂದು ಸಂಜೆ ಸರಿ ಸುಮಾರು ೨೪,೩೦೦ ಕೋಟಿ ರೂಪಾಯಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ. ಇದೇ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಲಿದ್ದಾರೆ.
ಬಿಕಾನೇರ್‍ನಲ್ಲಿ ಸುಮಾರು ೨೪,೩೦೦ ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳನ್ನು ರಾಜ್ಯದ ಜನರಿಗೆ ನೀಡಲಿದ್ದಾರೆ. ಈ ಮೂಲಕ ರಾಜಸ್ತಾನದಲ್ಲಿ ಮೂಲಸೌಕರ್ಯ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವ ಗುರಿ ಹೊಂದಲಾಗಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ತಿಳಿಸಿದೆ.
ಅಮೃತಸರ – ಜಾಮ್‌ನಗರ ಎಕನಾಮಿಕ್ ಕಾರಿಡಾರ್‍ನ ಆರು ಪಥಗಳ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ವಿಭಾಗವನ್ನು ಪ್ರಧಾನಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ರಾಜಸ್ಥಾನದಲ್ಲಿ ೫೦೦ ಕಿಲೋಮೀಟರ್‍ಗೂ ಹೆಚ್ಚು ವ್ಯಾಪಿಸಿರುವ ಈ ವಿಭಾಗ ಹನುಮಾನ್‌ಗಢ್ ಜಿಲ್ಲೆಯ ಜಖ್ಡವಾಲಿ ಗ್ರಾಮದಿಂದ ಜಲೋರ್ ಜಿಲ್ಲೆಯ ಖೆತ್ಲಾವಾಸ್ ಗ್ರಾಮದವರೆಗೆ ಸಾಗುತ್ತದೆ, ಈ ಯೋಜನೆಯನ್ನು ಸುಮಾರು ೧೧,೧೨೫ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಎಕ್ಸ್‌ಪ್ರೆಸ್‌ವೇ ಪ್ರಯಾಣದ ಸಮಯ ಕಡಿಮೆ ಮಾಡುತ್ತದೆ.ಪ್ರಮುಖ ನಗರಗಳು ಮತ್ತು ಕೈಗಾರಿಕಾ ಕಾರಿಡಾರ್‍ಗಳ ನಡುವಿನ ಸಂಪರ್ಕ ಸುಧಾರಿಸುತ್ತದೆ. ಎಕ್ಸ್‌ಪ್ರೆಸ್‌ವೇ ಸರಕುಗಳ ತಡೆರಹಿತ ಸಾಗಣೆ ಸುಗಮಗೊಳಿಸುವುದು ಮಾತ್ರವಲ್ಲದೆ ಅದರ ಮಾರ್ಗದಲ್ಲಿ ಪ್ರವಾಸೋದ್ಯಮ ಮತ್ತು ಆರ್ಥಿಕ ಅಭಿವೃದ್ಧಿ ಹೆಚ್ಚಿಸಲು ಸಹಕಾರಿಯಾಗಲಿದೆ.
ವಿದ್ಯುತ್ ಕ್ಷೇತ್ರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸುಮಾರು ೧೦,೯೫೦ ಕೋಟಿ ರೂಪಾಯಿ ಮೌಲ್ಯದ ಹಸಿರು ಇಂಧನ ಕಾರಿಡಾರ್‍ಗಾಗಿ ಅಂತರ-ರಾಜ್ಯ ಪ್ರಸರಣ ಮಾರ್ಗದ ಹಂತ-೧ ಅನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಹಸಿರು ಶಕ್ತಿ ಕಾರಿಡಾರ್ ಸುಮಾರು ೬ ಗಿಗಾ ವ್ಯಾಟ್ ನವೀಕರಿಸಬಹುದಾದ ಶಕ್ತಿ ಉತ್ಪಾದನಾ ಸಾಮಥ್ರ್ಯ ಹೊಂದಿದೆ.
ಪ್ರಧಾನಿ ಮೋದಿ ಅವರು ಬಿಕಾನೆರ್ ಅನ್ನು ಭಿವಾಡಿ ಟ್ರಾನ್ಸ್‌ಮಿಷನ್ ಲೈನ್‌ಗೆ ಸಮರ್ಪಿಸಲಿದ್ದಾರೆ. ಸುಮಾರು ೧,೩೪೦ ಕೋಟಿ ರೂಪಾಯಿ ವೆಚ್ಚದಲ್ಲಿ ಪವರ್ ಗ್ರಿಡ್ ಅಭಿವೃದ್ಧಿಪಡಿಸಲಿರುವ ಬಿಕಾನೇರ್ ಟು ಭಿವಾಡಿ ಟ್ರಾನ್ಸ್‌ಮಿಷನ್ ಲೈನ್ ರಾಜಸ್ಥಾನದಲ್ಲಿ ೮.೧ ಗಿಗಾ ವ್ಯಾಟ್ ಸೌರಶಕ್ತಿ ಉತ್ಪಾದನೆಗೆ ಸಹಕಾರಿಯಾಗಲಿದೆ.
ಬಿಕಾನೇರ್‍ನಲ್ಲಿ ೩೦ ಹಾಸಿಗೆಗಳ ಹೊಸ ಉದ್ಯೋಗಿಗಳ ರಾಜ್ಯ ವಿಮಾ ನಿಗಮ ಆಸ್ಪತ್ರೆಯನ್ನು ಪ್ರಧಾನಿ ಲೋಕಾರ್ಪಣೆ ಮಾಡಲಿದ್ದಾರೆ. ಆಸ್ಪತ್ರೆ ೧೦೦ ಹಾಸಿಗೆಗಳಿಗೆ ಉನ್ನತೀಕರಿಸಬಹುದಾದ ಸಾಮಥ್ರ್ಯ ಹೊಂದಿರುತ್ತದೆ. ಈ ಆಸ್ಪತ್ರೆಯು ಪ್ರಮುಖ ಆರೋಗ್ಯ ಸೌಲಭ್ಯವಾಗಿ ಉತ್ತಮ ಪಡಿಸಲು ನೆರವಾಗಲಿದೆ.