24 ವರ್ಷಗಳ ಬಳಿಕ ಸಿಕ್ಕಿಬಿದ್ದ ದಾವೂದ್ ಇಬ್ರಾಹಿಂ ಬಂಟ ಅಬ್ದುಲ್

ಜಾರ್ಖಂಡ್‌,ಡಿ.27-ದೇಶದ ಮೋಸ್ಟ್ ವಾಂಟೆಡ್ ದಾವೂದ್ ಇಬ್ರಾಹಿಂ ಆಪ್ತ ಸಹಾಯಕ ಅಬ್ದುಲ್ ಮಜೀದ್ ಕುಟ್ಟಿಯನ್ನು ಗುಜರಾತ್ ನ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್)ದ ಅಧಿಕಾರಿಗಳು ಬಂಧಿಸಿದ್ದಾರೆ.
ಕಳೆದ 24 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೇರಳ ಮೂಲದ ಅಬ್ದುಲ್ ಮಜೀದ್ ಕುಟ್ಟಿಯನ್ನು ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದು ಈತ ಉಗ್ರಗಾಮಿಗಳ ಹಲವು ರಹಸ್ಯಗಳನ್ನು ಬಾಯ್ಬಿಡಬಹುದು ಎನ್ನಲಾಗಿದೆ.
ಕಳೆದ 1996ರಲ್ಲಿ 106 ಪಿಸ್ತೂಲ್, 750 ಕಾರ್ಟ್ರಿಜ್ ಗಳು ಮತ್ತು ಸುಮಾರು 4 ಕೆಜಿ ಆರ್‌ಡಿಎಕ್ಸ್ ಸಂಗ್ರಹಿಸುವ ಅಪರಾಧದಲ್ಲಿ ಮಜೀದ್ ಭಾಗಿಯಾಗಿದ್ದನು.
ಹಿರಿಯ ಎಟಿಎಸ್ ಅಧಿಕಾರಿಯೊಬ್ಬರು, ಈ ಪ್ರಕರಣ ಸಂಬಂಧ ಇತರ ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ ಕುಟ್ಟಿ 24 ವರ್ಷಗಳಿಂದ ತಲೆಮರೆಸಿಕೊಂಡಿದ್ದು ಇದೀಗ ಜಾರ್ಖಂಡ್ನಲ್ಲಿ ಸಿಕ್ಕಿಬಿದ್ದಿದ್ದಾನೆ ಎಂದು ಹೇಳಿದರು
ನಮ್ಮ ಗುಪ್ತಚರ ಮೂಲಗಳಿಂದ ಅವರು ಇರುವ ಸ್ಥಳದ ಬಗ್ಗೆ ನಮಗೆ ಮಾಹಿತಿ ಸಿಕ್ಕಿತ್ತು. ಕೂಡಲೇ ನಮ್ಮ ತಂಡವನ್ನು ಜಾರ್ಖಂಡ್‌ಗೆ ಕಳುಹಿಸಿ ಬಂಧಿಸಲಾಯಿತು. ಎಟಿಎಸ್ ಪ್ರಕಾರ, ಭೂಗತ ಜಗತ್ತಿನ ಡಾನ್ ದಾವೂದ್ ಇಬ್ರಾಹಿಂ ಮತ್ತು ಅವರ ಗ್ಯಾಂಗ್ ಗುಜರಾತ್ ಮತ್ತು ಮುಂಬೈಯಲ್ಲಿ ಶಾಂತಿ ಕದಡುವ ಯೋಜನೆಯನ್ನು ಹೊಂದಿತ್ತು. ಅದಕ್ಕಾಗಿಯೇ ಇಷ್ಟು ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಆರ್‌ಡಿಎಕ್ಸ್ ಸಂಗ್ರಹಿಸಿದ್ದರು ಎಂದು ಹೇಳಿದೆ.
ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಇತರ ಆರೋಪಿಗಳನ್ನು ಪ್ರಶ್ನಿಸಿದಾಗ ಕುಟ್ಟಿ ಹೆಸರು ಬೆಳಕಿಗೆ ಬಂದಿದೆ ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.