24 ರಂದು ಕ್ಷಯರೋಗ ನಿರ್ಮೂಲನೆಗಾಗಿ ಸೈಕಲ್ ಜಾಥಾ

ಗಂಗಾವತಿ, ಮಾ.22: ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಕ್ಷಯರೋಗ ನಿರ್ಮೂಲನೆಗಾಗಿ ಮಾ.24 ರಂದು ಗಂಗಾವತಿಯಿಂದ ಅಂಜನಾದ್ರಿ ಬೆಟ್ಟದ ವರೆಗೆ ಸೈಕಲ್ ಜಾಥಾ ಆಯೋಜಿಸಲಾಗಿದೆ ಎಂದು ವೈದ್ಯಾಧಿಕಾರಿ ಡಾ.ಈಶ್ವರ ಸವಡಿ ಹೇಳಿದರು.
ನಗರದ ಉಪ ವಿಭಾಗ ಆಸ್ಪತ್ರೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕ್ಷಯರೋಗ ಪೀಡಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕ್ಷಯರೋಗ ನಿರ್ಮೂಲನೆ ಮಾಡುವ ಸಲುವಾಗಿ ನಗರದ
ಜನತೆ ಕ್ಷಯರೋಗದ ಬಗ್ಗೆ ಜಾಗೃತಿ ಮೂಡಿಸಲು ಈ ಜಾಥಾ ಹಮ್ಮಿಕೊಂಡಿದೆ ಎಂದರು.
ನಗರದ ಎ.ಪಿ.ಎಂ.ಸಿ. ಆವರಣದಿಂದ ಅಂದು ಬೆಳಗ್ಗೆ 6 ಗಂಟೆಗೆ ಎರಡು ತಂಡಗಳಲ್ಲಿ ಜಾಥಾ ಪ್ರಾರಂಭವಾಗಿ ಒಂದು ತಂಡ ನಗರ ವ್ಯಾಪ್ತಿಯಲ್ಲಿ ಹಾಗೂ ಇನ್ನೊಂದು ತಂಡ ಆನೆಗುಂದಿ ಮಾರ್ಗವಾಗಿ ಸಂಚರಿಸಿ ಅಂಜನಾದ್ರಿ ತಲುಪಲಿದೆ. ಬಳಿಕ ಸಂಜೆ ಐಎಂಐ ಭವನದಲ್ಲಿ ತಿಳುವಳಿಕೆ ಕಾರ್ಯಕ್ರಮ ನಡೆಯಲಿದ್ದು, ಸಾಧಕರಿಗೆ ಸನ್ಮಾನಿಸಲಾಗುವುದು ಎಂದು ಮಾಹಿತಿ‌ ನೀಡಿದರು.
ಜಾಥಾದಲ್ಲಿ ಜಿಲ್ಲಾಧಿಕಾರಿ ವಿಕಾಸ ಕಿಶೋರ್ ಸುರಳ್ಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಅಲಕನಂದಾ ಡಿ.ಮಳಗಿ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಮಹೇಶ ಎಂ.ಜಿ. ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಕ್ಷಯರೋಗ ನಿರ್ಮೂಲನೆಗಾಗಿ ಜನಾಂದೋಲನವನ್ನಾಗಿಸಲು ಈ ಸೈಕಲ್ ಜಾಥಾದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ವೇಳೆ ಕ್ಷಯಮುಕ್ತ ಕೊಪ್ಪಳಕ್ಕಾಗಿ ಜನಾಂದೋಲನ ದ ಟೀ-ಶರ್ಟ್ , ಕ್ಯಾಪ್ ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ, ಬಿಇಒ ಸೋಮಶೇಖರ, ಡಾ.ಸತೀಶ ರಾಯ್ಕರ್ , ಡಾ.ಶಿವಾನಂದ, ಚಿನ್ನು ಪಾಟೀಲ ಪ್ರಭಾಕರ, ಮಲ್ಲಿಕಾರ್ಜುನ ಹಾಗೂ ಸಿಬ್ಬಂದಿ ಇದ್ದರು.