24 ತಾಸಿನಲ್ಲಿ ಹಿಂದಿರುಗಿದರೆ ಮೈತ್ರಿಯಿಂದ ವಾಪಸ್ ಬರಲು ಸಿದ್ದ: ರಾವುತ್

ಮುಂಬೈ, ಜೂ.23-ಬಂಡಾಯ ಶಾಸಕರು 24 ಗಂಟೆಯೊಗಳಗೆ ಹಿಂದಿರುಗುವುದಾದರೆ ಶಿವಸೇನೆ ಮೈತ್ರಿಯಿಂದ ಹೊರಬರಲು ಸಿದ್ಧ ಎಂದು ಶಿವಸೇನೆ ಸಂಸದ ಸಂಜಯ್ ರಾವುತ್ ತಿಳಿಸಿದರು.
ಬಂಡಾಯ ನಾಯಕ ಏಕನಾಥ್ ಶಿಂಧೆ ಮೇಲುಗೈ ಸಾಧಿಸಿರುವ ಬೆನ್ನಲ್ಲೇ ಹೊಸ ಪ್ರಸ್ತಾಪವನ್ನು ಮುಂದಿಟ್ಟು ಶಾಸಕರ ಮನವೊಲಿಕೆಗೆ ರಾವುತ್ ಮುಂದಾಗಿದ್ದಾರೆ.
ಮುಂಬೈನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಡಾಯ ಶಾಸಕರು ಬಯಸಿದರೆ ಶಿವಸೇನೆಯು ಕಾಂಗ್ರೆಸ್ ಮತ್ತು ಎನ್‍ಸಿಪಿ ಪಕ್ಷದೊಂದಿಗೆ ಹಂಚಿಕೊಂಡಿರುವ ಮೈತ್ರಿಯಾದ ಎಂವಿಎಯಿಂದ ಹೊರಬರುತ್ತದೆ. ಆದರೆ ಅವರು 24 ಗಂಟೆಗಳಲ್ಲಿ ಮುಂಬೈಗೆ ಹಿಂದಿರುಗಬೇಕು ಎಂದು ತಿಳಿಸಿದರು.
ನಿಜವಾದ ಶಿವ ಸೈನಿಕರೆಂದು ಹೇಳುತ್ತಿರುವ ನೀವು, ಪಕ್ಷ ತೊರೆಯುವುದಿಲ್ಲ ಎಂದಿರುವಿರಿ. 24 ಗಂಟೆಗಳಲ್ಲಿ ನೀವು ಮುಂಬೈಗೆ ಮರಳಿ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ಚರ್ಚೆ ನಡೆಸುವುದಾದರೆ, ನಿಮ್ಮ ಬೇಡಿಕೆಯನ್ನು ಪರಿಗಣಿಸಲು ಸಿದ್ಧರಿದ್ದೇವೆ. ನಿಮ್ಮ ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದನೆ ಸಿಗಲಿದೆ. ಟ್ವಿಟ್ಟರ್ ಮತ್ತು ವಾಟ್ಸಪ್‍ನಲ್ಲಿ ಪತ್ರಗಳನ್ನು ಬರೆಯಬೇಡಿ ಎಂದು ತಾಕೀತು ಮಾಡಿದ್ದಾರೆ.