24 ಗಂಟೆ ವಹಿವಾಟಿಗೆ ರೈತರ ಆಗ್ರಹ

ಕೋಲಾರ,ಏ.೩೦: ಕೊರೊನಾ ೨ನೇ ಅಲೆ ಹಿನ್ನೆಲೆಯಲ್ಲಿ ಎಪಿಎಂಸಿ ಮಾರುಕಟ್ಟೆ ವಹಿವಾಟಿಗೆ ಬೆಳಗ್ಗೆ ೬ ರಿಂದ ೧೦ ಗಂಟೆಯವರೆಗೆ ನಿಗದಿಪಡಿಸಿರುವ ಅವಧಿಯನ್ನು ೨೪ ಗಂಟೆ ಕಲ್ಪಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ಆಗ್ರಹಿಸಿ ರೈತಸಂಘದಿಂದ ಎಪಿಎಂಸಿ
ಕಾರ್ಯದರ್ಶಿ ಟಿ.ಎಸ್.ರವಿಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಕೊರೊನಾ ಎರಡನೇ ಅಲೆಯ ನಿಯಂತ್ರಣಕ್ಕೆ ಸರ್ಕಾರವು ಕೈಗೊಂಡಿರುವ ಎಲ್ಲ ಕ್ರಮಗಳು ಸ್ವಾಗತಾರ್ಹವಾಗಿವೆ. ಆದರೆ ಅಗತ್ಯ ವಸ್ತುಗಳಿಗೆ ನೀಡಿರುವ ಕಾಲಾವಕಾಶದಂತೆಯೇ ಕೃಷಿ ಉತ್ಪನ್ನ ಮಾರುಕಟ್ಟೆಗಳಿಗೂ ಬೆಳಗ್ಗೆ ೬ ಗಂಟೆಯಿಂದ ೧೦ ಗಂಟೆಯವರೆಗೂ ನೀಡಿರುವುದರಿಂದ ರೈತರು, ವ್ಯಾಪಾರಸ್ಥರಿಗೆ ಸಾಕಷ್ಟು ತೊಂದರೆಯಾಗಲಿದೆ ಎಂದು ಹೇಳಿದರು.
ಜಿಲ್ಲೆಯಾದ್ಯಂತ ಸಾವಿರಾರು ಎಕರೆ ಪ್ರದೇಶದಲ್ಲಿ ದುಬಾರಿಯಾಗಿರುವ
ರಸಗೊಬ್ಬರ ಹಾಗೂ ಮತ್ತಿತರ ಕೃಷಿ ಸಾಮಗ್ರಿಗಳ ನಡುವೆಯೂ ಲಕ್ಷಾಂತರರೂಪಾಯಿ ಬಂಡವಾಳ ಹಾಕಿ ಅನೇಕ ಬೆಳೆಗಳನ್ನು ರೈತರು ಬೆಳೆಯಲಾಗಿದ್ದು, ಸಮೃದ್ಧವಾದ ಬೆಳೆ ಸಹ ಬಂದಿದ್ದು, ಇನ್ನೇನು
ಮಾರುಕಟ್ಟೆಗೆ ಬರುವ ಸಮಯದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರದ ಎಲ್ಲ ನಿಯಮಗಳನ್ನು ಪಾಲಿಸುವುದಕ್ಕೆ ನಾವು ಸಿದ್ಧರಿದ್ದೇವೆ. ಆದರೆ, ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆಯನ್ನು ನಡೆಸಿಕೊಳ್ಳಲು ಹೆಚ್ಚಿನ ಕಾಲಾವಕಾಶ ಅಗತ್ಯವಿದ್ದು, ಇದೀಗ ನಿಗದಿಪಡಿಸಿರುವ ಸಮಯವು ಸಾಕಾಗುವುದಿಲ್ಲ. ಅದರಂತೆ ನಿಗಧಿಪಡಿಸಿರುವ ಸಮಯಕ್ಕೆ ಮಾರುಕಟ್ಟೆ ವಹಿವಾಟು ನಡೆಸಬೇಕು ಎಂಬ ನಿಯಮದಂತೆ ಪಾಲನೆ ಮಾಡಿದರೆ ಯಾವುದೇ ವ್ಯಾಪಾರಸ್ಥರು ದಲ್ಲಾಳಿಗಳು ಸಮರ್ಪಕವಾದ ವ್ಯಾಪಾರ ಮಾಡಲಾಗದೆ ರೈತರು ತರುವ ಬೆಳೆಗಳಿಗೆ ಸೂಕ್ತವಾದ ಬೆಲೆ ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ರೈತರು ಬೆಳೆಗಳನ್ನು ಮಾರುಕಟ್ಟೆಗೆ ತರದೇ ಇದ್ದರೆ ತೋಟಗಳಲ್ಲಿ ಬೆಳೆ ನಾಶ ಮಾಡಬೇಕಾದ ಪರಿಸ್ಥಿತಿ ಬರುತ್ತದೆ. ಇದರಿಂದ ಮಾನಸಿಕವಾಗಿ ಯೋಚನೆ ಮಾಡಿ ಖಾಸಗಿ ಸಾಲಕ್ಕೆ ಸಿಲುಕುವ ಜೊತೆಗೆ ಕೃಷಿ ಕ್ಷೇತ್ರದಿಂದ ವಿಮುಕ್ತಿ ಹೊಂದುವ ನಿರ್ಧಾರವನ್ನು ತೆಗೆದುಕೊಳ್ಳುವ ಜೊತೆಗೆ ಅಹಿತಕರ ಘಟನೆಗಳೂ ಸಂಭವಿಸುತ್ತವೆ. ದಿನದ ೨೪ ಗಂಟೆ ವಹಿವಾಟು ನಡೆಸಲು ಅವಕಾಶ ಕೊಟ್ಟರೆ ಮಾತ್ರ ಮಾರುಕಟ್ಟೆಯಲ್ಲಿ ಸೂಕ್ತವಾದ ವ್ಯವಹಾರ ನಡೆಯುವುದಕ್ಕೆ ರೈತರು ಬೆಳೆದ ಬೆಳೆಗಳಿಗೆ ತಕ್ಕಮಟ್ಟಿಗೆ ಬೆಲೆ ಸಿಗುತ್ತದೆ. ಜೊತೆಗೆ ವ್ಯಾಪಾರಸ್ಥರು ಧೈರ್ಯವಾಗಿ ಸರಕುಗಳನ್ನು ಖರೀದಿ ಮಾಡುವ ಧೈರ್ಯ ಮಾಡುವ ಜೊತೆಗೆ ಕೂಲಿ ಕಾರ್ಮಿಕರು ಲೋಡ್ ಮಾಡಲು ಅನುಕೂಲವಾಗುತ್ತದೆ. ಜೊತೆಗೆ ಕೊರೊನಾ ೨ನೇ ಅಲೆಯ ನಿಯಮಗಳನ್ನು ಪಾಲನೆ ಮಾಡುವ ಜೊತೆಗೆ ಮಂಡಿ ಮಾಲೀಕರು, ವ್ಯಾಪಾರಸ್ಥರು, ಕೂಲಿಕಾರ್ಮಿಕರಿಗೆ ಕಡ್ಡಾಯವಾಗಿ ಪಾಸ್ ವಿತರಣೆ ಮಾಡಬೇಕು. ಆ ನಿಟ್ಟಿನಲ್ಲಿ ಗಂಭೀರವಾಗಿ ಪರಿಗಣಿಸಿ ಮತ್ತಷ್ಟು ನಿಯಮಗಳನ್ನು ಪಾಲಿಸಲು ಸೂಚನೆ ನೀಡುವುದರ ಜೊತೆಗೆ ಎಪಿಎಂಸಿ ಮಾರುಕಟ್ಟೆಯಲ್ಲಿನ ಹರಾಜು ಪ್ರಕ್ರಿಯೆಗೆ ಬೆಳಗ್ಗೆ ೬ ಗಂಟೆಯಿಂದ ೧೦ ಗಂಟೆ ಬದಲಿಗೆ ೨೪ ಗಂಟೆ ಕಾಲಾವಕಾಶ ನೀಡಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಎಪಿಎಂಸಿ ಕಾರ್ಯದರ್ಶಿ ರವಿಕುಮಾರ್ ಅವರು, ತಮ್ಮ ಮನವಿಯನ್ನು ಕೃಷಿ ಮಾರಾಟ ಇಲಾಖೆ ನಿರ್ದೇಶಕರು, ಜಿಲ್ಲಾಧಿಕಾರಿಗಳಿಗೆ ರವಾನಿಸಿ ಅಗತ್ಯ
ಕ್ರಮಕೈಗೊಳ್ಳುವ ಭರವಸೆ ನೀಡಿದರು.