24 ಕ್ವಿಂಟಲ್ ಪಡಿತರ ಅಕ್ಕಿ ವಶ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ :ಏ,6- ತಾಲೂಕಿನ ಕುರುವತ್ತಿ ಪ್ಲಾಟ್ ಸಮೀಪ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಅಕ್ಕಿ ಮೂಟೆಗಳು ತುಂಬಿದ್ದ ಮಿನಿಲಾರಿಯನ್ನು ಹಿರೇಹಡಗಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕುರುವತ್ತಿ ಪ್ಲಾಟ್ ಬಳಿ ಪೊಲೀಸರು ಮಿನಿಲಾರಿಯನ್ನು ತಡೆದು ಪರಿಶೀಲಿಸಿದಾಗ ಅದರಲ್ಲಿ ಪಡಿತರ ಅಕ್ಕಿ ಸಾಗಣೆಯಾಗುತ್ತಿರುವುದು ಬೆಳಕಿಗೆ ಬಂದಿದೆ. ಅಂದಾಜು 1 ಲಕ್ಷ ರೂ. ಬೆಲೆ ಬಾಳುವ ಮಿನಿಲಾರಿ, 52,800 ರೂ. ಮೌಲ್ಯದ 24 ಕ್ವಿಂಟಲ್ ಪಡಿತರ ಅಕ್ಕಿಯನ್ನು ಪೊಲೀಸರು, ಆಹಾರ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಹಿರೇಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.