24ರಿಂದ ಮಾವು, ಹಲಸು ಮೇಳ

ಸಂಜೆವಾಣಿ ನ್ಯೂಸ್
ಮೈಸೂರು.ಮೇ.20:- ಒಂದೇ ಸೂರಿನಡಿ ವಿವಿಧ ಮಾವಿನ ತಳಿಯ ಹಣ್ಣು, ಹಲಸಿನ ಹಣ್ಣಿನ ರುಚಿ ಸವಿಯಲು ಮೇ 24ರಿಂದ ಮೂರು ದಿನಗಳ ಮಾವು, ಹಲಸು ಮೇಳ ಆಯೋಜಿಸಲಾಗುತ್ತಿದೆ.
ತೋಟಗಾರಿಕೆ ಇಲಾಖೆ, ಜಿಲ್ಲಾ ಹಾಪ್‍ಕಾಮ್ಸ್ ವತಿಯಿಂದ ನಗರದ ಕುಪ್ಪಣ್ಣ ಪಾರ್ಕ್ ಆವರಣದಲ್ಲಿ ಮೇ 24, 25 ಮತ್ತು 26 ರಂದು ಮಾವು ಮತ್ತು ಹಲಸು ಮೇಳ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೂರು ದಿನಗಳ ಕಾಲ ಮೇಳ ನಡೆಸಲು ಉದ್ದೇಶಿಸಲಾಗಿದೆ. ಈ ಸಂಬಂಧ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಲೋಕಸಭಾ ಚುನಾವಣೆ ಬಳಿಕ ರೈತರ ಸಭೆ ಕರೆದಿದ್ದು, ಸಭೆಯಲ್ಲಿ ಚರ್ಚಿಸಿ ಮೇಳದ ದಿನಾಂಕ ಅಂತಿಮಗೊಳಿಸಿದ್ದಾರೆ. ಮಾವಿನಹಣ್ಣು ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಈ ಹಣ್ಣುಗಳ ಬೆಳೆಗಾರರಿಗೆ ಉತ್ತಮ ದರ ದೊರಕುವಂತೆ ಮಾಡುವುದು ಹಾಗೂ ಗ್ರಾಹಕರು ನ್ಯಾಯಯುತ ಬೆಲೆಯಲ್ಲಿ ಹಣ್ಣುಗಳನ್ನು ಖರೀದಿಸಲು ಉತ್ತೇಜನ ನೀಡುವ ಉದ್ದೇಶದೊಂದಿಗೆ ತೋಟಗಾರಿಕೆ ಇಲಾಖೆ ಹಲವು ವರ್ಷಗಳಿಂದ ಮಾವು ಮತ್ತು ಹಲಸು ಮೇಳ ಏರ್ಪಡಿಸುತ್ತಿದೆ. ಈ ಬಾರಿಯೂ ಅದನ್ನು ಮುಂದುವರಿಸಲು ಸಿದ್ಧತೆ ನಡೆಸಿದೆ.
ರಾಸಾಯನಿಕ ಮುಕ್ತ ಹಣ್ಣು: ಮಾವು ಪ್ರಿಯರ ಆರೋಗ್ಯದ ಹಿತದೃಷ್ಟಿಯಿಂದ ಕ್ಯಾಲ್ಸಿಯಂ ಕಾರ್ಬೈಡ್ ಮುಕ್ತ, ನೈಸರ್ಗಿಕವಾಗಿ ಮಾಗಿಸಿದ ಉತ್ಕೃಷ್ಟ ದರ್ಜೆಯ ವಿವಿಧ ತಳಿಯ ಹಣ್ಣುಗಳು ಮೇಳದಲ್ಲಿ ಗ್ರಾಹಕರಿಗೆ ದೊರೆಯುವಂತೆ ಮಾಡುತ್ತಿದ್ದು, ಉತ್ತಮ ಬೆಲೆ ನಿಗದಿಪಡಿಸಲಾಗುತ್ತದೆ. ವಿವಿಧ ಮಾವು, ಹಲಸಿನ ತಳಿಗಳನ್ನು ಮೇಳದಲ್ಲಿ ಪರಿಚಯಿಸಲು ಉದ್ದೇಶಿಸಲಾಗಿದೆ. ಮಾನಕೂರ, ಆಮ್ಲೆಟ್, ಚೈತ್ರಪೈರಿ, ಸೇಲಂ, ಶಿರಸಿ ಲೋಕಲ್, ರತ್ನಗಿರಿ(ಆಲ್ಫನ್ಸ್), ಬಾದಾಮಿ, ರಸಪೂರಿ, ಮಲಗೋವ, ಮಲ್ಲಿಕಾ, ಸಿಂಧೂರ, ತೋತಾಪುರಿ, ಬಾಗನಪಲ್ಲಿ, ದಶೇರಿ, ಕಾಲಾಪ ಹಾಡ್, ಕೇಸರ್, ಸಕ್ಕರೆಗುತ್ತಿ, ಆಮ್ರಪಾಲಿ, ದಿಲ್‍ಪಸಂದ್ ಸೇರಿದಂತೆ ಹಲವು ತಳಿಯ ಹಣ್ಣುಗಳನ್ನು ಮೇಳದಲ್ಲಿ ಮಾರಾಟ ಮಾಡುವ ಮಾಡುವ ಸಾಧ್ಯತೆ ಇದೆ. ಒಂದೊಂದು ಜಾತಿಯ ಮಾವಿಗೂ ಒಂದೊಂದು ಬೆಲೆ ನಿಗದಿ ಮಾಡಲಾಗುತ್ತದೆ. ತೋಟಗಾರಿಕೆ ಇಲಾಖೆ ದರ ನಿಗದಿಪಡಿಸಲಿದೆ.
ನೈಸರ್ಗಿಕ ಹಣ್ಣು ಮಾರಾಟ: ನೈಸರ್ಗಿಕವಾಗಿ ಹಣ್ಣಾಗಿಸಿದ ಮಾವಿನಹಣ್ಣುಗಳ ಜತೆಗೆ, ಕ್ಯಾಲ್ಸಿಯಂ ಕಾರ್ಬೈಡ್‍ನಿಂದ ಮಾಗಿಸಿದ ಹಣ್ಣುಗಳೂ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆ ಪ್ರವೇಶಿಸಿವೆ. ಕ್ಯಾಲ್ಸಿಯಂ ಕಾರ್ಬೈಡ್ ರಾಸಾಯನಿಕ ಸಿಂಪಡಿಸಿದ ಹಣ್ಣುಗಳ ಸೇವನೆಯಿಂದ ಕ್ಯಾನ್ಸರ್, ಅಸ್ತಮಾ, ಕೆಮ್ಮು, ನೆಗಡಿ ಮುಂತಾದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ. ಆದರೆ, ನೈಸರ್ಗಿಕವಾಗಿ ಮತ್ತು ಕ್ಯಾಲ್ಸಿಯಂ ಕಾರ್ಬೈಡ್‍ನಿಂದ ಮಾಗಿಸಿದ ಹಣ್ಣುಗಳ ನಡುವಿನ ವ್ಯತ್ಯಾಸ ಗುರುತಿಸುವುದು ಗ್ರಾಹಕರಿಗೆ ಕಷ್ಟವಾಗಲಿದೆ. ಆದ್ದರಿಂದ ಮೇಳದಲ್ಲಿ ಈ ಗೊಂದಲಕ್ಕೆ ಅವಕಾಶ ಇಲ್ಲದಂತೆ ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.
ವಿಟಮಿನ್ ಭರಿತ: ಮಾವಿನಹಣ್ಣಿನಲ್ಲಿ ವಿಟಮಿನ್ ಎ ಮತ್ತು ಸಿ ಅಂಶಗಳಿರುತ್ತವೆ. ಅಲ್ಲದೆ, ನಾರಿನಾಂಶ ಇರುತ್ತದೆ. ಮಾವು ಮಲಬದ್ಧತೆ ನಿವಾರಣೆಗೆ ತುಂಬ ಒಳ್ಳೆಯದು. ಜತೆಗೆ, ದೇಹದಲ್ಲಿನ ಕೊಬ್ಬಿನಾಂಶವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಮಾವಿನಹಣ್ಣಿನ ಸೀಜನ್ ಬಂದಾಗಲೆಲ್ಲ ಜನರು ಮುಗಿಬಿದ್ದು ಖರೀದಿಸುತ್ತಾರೆ.