ಕೊರೊನಾ ಸೋಂಕಿಗೆ ತಾಯಿ-ಮಗ ಸಾವು
ಬ್ಯಾಡಗಿ, ಮೇ30 : ಎರಡನೇ ಹಂತದ ಕೊರೊನಾ ಸೋಂಕಿಗೆ ತಾಯಿ ಮಗ ಇಬ್ಬರೂ ಒಂದೇ ದಿನ ಸಾವನ್ನಪ್ಪಿದ ಧಾರುಣ ಘಟನೆ ತಾಲೂಕಿನ ಚಿಕ್ಕಣಜಿ ಗ್ರಾಮದಲ್ಲಿ ಜರುಗಿದೆ.
ಚಿಕ್ಕಣಜಿ ಗ್ರಾಮದ ಲಲಿತವ್ವ ಬನ್ನಿಹಟ್ಟಿ (50) ಹಾಗೂ ನಾಗರಾಜ ಬನ್ನಿಹಟ್ಟಿ (30) ಎಂಬುವರೇ ಕೊರೊನಾ ಸೋಂಕಿಗೆ ಬಲಿಯಾದ ತಾಯಿ, ಮಗ ಎನ್ನಲಾಗಿದೆ.
ಹಂಸಭಾವಿ ಹೆಸ್ಕಾಂ ಇಲಾಖೆಯಲ್ಲಿ ಕಳೆದ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದ ನಾಗರಾಜನಿಗೆ ಮೇ 21ರಂದು ಕೊರೋನಾ ಸೋಂಕು ಧೃಡಪಟ್ಟಿತ್ತು. ಹಿರೇಕೆರೂರು ಕೋವಿಡ್ ಕೇರ್ ಸೆಂಟರ್‍ನಲ್ಲಿ ಚಿಕಿತ್ಸೆ ಪಡೆಯಲು ದಾಖಲಾಗಿದ್ದು, ನಂತರ ಉಸಿರಾಟದ ಸಮಸ್ಯೆಯಿಂದ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೇ ಸಂದರ್ಭದಲ್ಲಿ ತಾಯಿಗೂ ಸೋಂಕು ದೃಢಪಟ್ಟಿತ್ತು. ಹಿರೇಕೆರೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಪಡೆಯುತ್ತಿದ್ದಾಗ ತಾಯಿಗೂ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು.
ಆದರೆ ಎರಡೂ ಕಡೆಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಒಂದೇ ದಿನದಲ್ಲಿ ಕೆಲವೇ ಗಂಟೆಗಳ ಅಂತರದಲ್ಲಿ ತಾಯಿ ಮತ್ತು ಮಗ ಇಬ್ಬರೂ ಸಾವನ್ನಪ್ಪಿದ್ದಾರೆ. ಮೇ 28ರ ತಡರಾತ್ರಿ ಮಗ ಮೃತಟ್ಟಿದ್ದು, ಬೆಳಗಿನ ಜಾವ ತಾಯಿ ಮೃತಪಟ್ಟಿದ್ದಾಳೆ. ಐದು ಜನ ಸದಸ್ಯರಿದ್ದ ಕುಟುಂಬದಲ್ಲಿ ತಾಯಿ ಮತ್ತು ಮಗ ಸಾವನ್ನಪ್ಪಿದ್ದು, ಕುಟುಂಬಕ್ಕೆ ನುಂಗಲಾರದ ತುತ್ತಾಗಿದೆ. ಮೃತರ ಅಂತ್ಯಕ್ರಿಯೆಯನ್ನು ಕೋವಿಡ್ ನಿಯಮಾನುಸಾರ ನಡೆಸಲಾಯಿತು.