22 ರಂದು ಕನ್ನಡ ಭವನ ಭೂಮಿ ಪೂಜೆ

ಬೀದರ:ನ.18:ಬಹು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿ ಕನ್ನಡ ಭವನ ಭೂಮಿ ಪೂಜೆಯನ್ನು ದಿನಾಂಕ 22-11-2020 ರಂದು ಬೆಳಗ್ಗೆ 11ಕ್ಕೆ ಮಾನ್ಯ ಪಶು ಸಂಗೋಪನೆ, ವಕ್ಫ್, ಹಜ್ ಮತ್ತು ಬೀದರ-ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಬಿ. ಚವ್ಹಾಣ ಅವರು ನಡೆಸಿಕೊಡುವರು. ಜಿಲ್ಲೆಯ ಸಂಸದರು, ಶಾಸಕರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಹಾಗೂ ಸಾಹಿತಿಗಳು ಭಾಗವಹಿಸುವರು.
ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ಎಲ್ಲ ಸಮುದಾಯಗಳನ್ನೊಳಗೊಂಡ ಸಂಸ್ಥೆಯಾಗಿದೆ. ಜೊತೆಗೆ ನಾಡು-ನುಡಿ, ನೆಲ-ಜಲ ಸೇರಿದಂತೆ ಕನ್ನಡಿಗರ ಸಾಂಸ್ಕೃತಿಕ ಬದುಕಿನ ಸಂವರ್ಧನೆಗಾಗಿ ಜನ್ಮತಳೆದು ನೂರು ವರ್ಷ ಪೂರೈಸಿ ಈಗ ಶತಮಾನೋತ್ಸವ ಆಚರಿಸಿಕೊಂಡಿದೆ. ಗಡಿಭಾಗವಾದ ಬೀದರ್ ಜಿಲ್ಲೆಯಲ್ಲಿ 50 ವರ್ಷಗಳಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳು ನಡೆಯುತ್ತಿವೆ. ಐತಿಹಾಸಿಕ ಹಾಗೂ ಸಾಂಸ್ಕೃತಿಕವಾಗಿ ಬೀದರ್ ಜಿಲ್ಲೆ ಶ್ರೀಮಂತವಾಗಿದೆ. ಒಂದು ಕಡೆ ಮಹಾರಾಷ್ಟ್ರ, ಇನ್ನೊಂದು ಕಡೆ ತೆಲಂಗಾಣ ಇದೆ. ಇವುಗಳ ಮಧ್ಯೆ ನಮ್ಮ ಬೀದರ್ ಜಿಲ್ಲೆ ಇದೆ. ನೆರೆಯ ರಾಜ್ಯಗಳ ಭಾಷೆಗಳ ಪ್ರಭಾವದ ಮಧ್ಯೆಯೂ ಇಲ್ಲಿಯ ಜನ ಕನ್ನಡ ಭಾಷೆಯನ್ನು ಉಳಿಸಿಕೊಂಡು ಬಂದಿದ್ದಾರೆ. ರಾಜ್ಯದ ಮುಕುಟ ಮಣಿಯಂತಿರುವ ಬೀದರ್ ಜಿಲ್ಲೆಗೆ ಇನ್ನಷ್ಟು ಮೆರುಗು ತುಂಬಲು ಬೀದರ್ ನಗರದಲ್ಲಿ ಭವ್ಯ ಕನ್ನಡ ಭವನ ನಿರ್ಮಾಣವಾಗುತ್ತಿರುವುದು ಸಂತಸದ ಸಂಗತಿ. ಭವನದಲ್ಲಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಅನುಕೂಲವಾಗುವಂತೆ ಸಭಾಭವನ ನಿರ್ಮಾಣವಾಗುತ್ತಲಿದೆ.
ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ 50 ವರುಷ ಸುವರ್ಣಮಹೋತ್ಸವ ವರ್ಷಾಚರಣೆ ಸಂದರ್ಭದಲ್ಲಿ ಕನ್ನಡ ಭವನ ನಿರ್ಮಾಣ ವಾಗುತ್ತಿರುವುದು ಜಿಲ್ಲೆಯ ಜನತೆಗೆ ಹರುಷವುಂಟಾಗಿದೆ. ಅದಕ್ಕಾಗಿ ಕನ್ನಡ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೆಶ ಚನಶೆಟ್ಟಿ ತಿಳಿಸಿದ್ದಾರೆ.