22ಕ್ಕೆ ಕಲ್ಯಾಣ ಕುವರ ಚಲನಚಿತ್ರ ಬಿಡುಗಡೆ

ಭಾಲ್ಕಿ:ಎ.8: ‘ಈ ಭಾಗದ ನಡೆದಾಡುವ ದೇವರೆನಿಸಿದ್ದ ಲಿಂಗೈಕ್ಯ ಡಾ. ಚನ್ನಬಸವ ಪಟ್ಟದ್ದೇವರ ಜೀವನಾಧಾರಿತ ‘ಕಲ್ಯಾಣ ಕುವರ’ ಚಲನಚಿತ್ರ ಏಪ್ರಿಲ್ 22ರಂದು ರಾಜ್ಯದೆಲ್ಲೆಡೆ ಬಿಡುಗಡೆ ಆಗಲಿದೆ. ಅಂದು ಲಿಂಗೈಕ್ಯ ಪಟ್ಟದ್ದೇವರ ಸ್ಮರಣೋತ್ಸವ ದಿನವಾಗಿದ್ದು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚಲನಚಿತ್ರ ವೀಕ್ಷಿಸಬೇಕು’ ಎಂದು ನಟ, ನಿರ್ದೇಶಕ ಬಿ.ಜೆ.ವಿಷ್ಣುಕಾಂತ ತಿಳಿಸಿದರು.

ಇಲ್ಲಿಯ ಸದ್ಗುರು ವಿದ್ಯಾಲಯದಲ್ಲಿ ಮಂಗಳವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಕಷ್ಟ, ನಷ್ಟಗಳನ್ನು ಎದುರಿಸಿ ಪಟ್ಟದ್ದೇವರು ಮಾಡಿದ ಹೋರಾಟಗಳು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ವಿಧಾಯಕ ಕಾರ್ಯಗಳ ಬಗ್ಗೆ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಪೂಜ್ಯರ ಸಾಧನೆಗಳು ನಾಡಿನಾದ್ಯಂತ ಪರಿಚಿತವಾಗಬೇಕು. ಅವರ ಆದರ್ಶ ಇಂದಿನ ಮಠಾಧೀಶರಿಗೆ ಮಾದರಿ ಮತ್ತು ಅನುಕರಣೀಯ’ ಎಂದರು.ಸಾಹಿತಿ ಡಾ. ಸೋಮನಾಥ ನುಚ್ಚಾ ಮಾತನಾಡಿ, ‘ವಿಷ್ಣುಕಾಂತ ಅವರಲ್ಲಿ ಅಪಾರ ಪ್ರತಿಭೆ ಇದೆ. ಈ ಹಿಂದೆ ಡಾ. ಅಂಬೇಡ್ಕರ್‌ ಸಿನಿಮಾ ಮಾಡಿ, ಸ್ವತಃ ನಟಿಸಿ ನಿರ್ದೇಶನ ಕೂಡ ಮಾಡಿದ್ದಾರೆ. ಈಗ ಈ ಭಾಗದ ಜಂಗಮಜ್ಯೋತಿಯಾಗಿದ್ದ ಚನ್ನಬಸವ ಪಟ್ಟದ್ದೇವರ ಚಿತ್ರ ಮಾಡಿದ್ದು ಹೆಮ್ಮೆಯ ವಿಷಯ. ಎಲ್ಲ ಅಭಿಮಾನಿಗಳು ಸ್ನೇಹಿತರನ್ನು ಕರೆದೊಯ್ದು ಚಿತ್ರಮಂದಿರ ಗಳಲ್ಲಿ ವೀಕ್ಷಿಸಬೇಕು’ ಎಂದರು.
ದಯಾಳ್ ದಂಡಿನ್, ಇಮ್ಯಾನುಯಲ್ ಬೀದರ್, ಪಂಕಜಾ ಅಳ್ಳೆ, ಕಾವೇರಿ, ರಾಜಕುಮಾರ ಮೇತ್ರೆ, ಯಲ್ಲಾಲಿಂಗ ಇದ್ದರು. ಸದ್ಗುರು ಸಂಸ್ಥೆಯ ಸಂಸ್ಥಾಪಕ ಸೋಮನಾಥ ಮುದ್ದಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕಿ ಸುಜಾತಾ ಪಾಟೀಲ ಸ್ವಾಗತಿಸಿದರು. ಸಿದ್ರಾಮ ಅಳ್ಳೆ ವಂದಿಸಿದರು.