21 ರಿಂದ ಜಿಲ್ಲೆಯಲ್ಲಿ ವಿಜಯ ಸಂಕಲ್ಪ ಅಭಿಯಾನ ಆರಂಭ

ಬೀದರ್,ಜ.18-ಈ ತಿಂಗಳ 21 ರಿಂದ 29 ರವರೆಗೆ ಜಿಲ್ಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಜನರ ಮನೆ ಬಾಗಿಲಿಗೆ ಮುಟ್ಟಿಸುವ ನಿಟ್ಟಿನಲ್ಲಿ ವಿಜಯ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವರು ಹಾಗೂ ನವೀಕರಿಬಹುದಾದ ಇಂಧನ ಮೂಲ ಕೇಂದ್ರ ಸಚಿವರಾದ ಭಗವಂತ ಖೂಬಾ ತಿಳಿಸಿದರು.
ನಗರ ಹೊರವಲಯದಲ್ಲಿರುವ ಪಕ್ಷದ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ 5 ಲಕ್ಷ ಜನರಿಗೆ ಮಿಸ್ಡ್‍ಕಾಲ್ ನೀಡುವ ಮೂಲಕ ಸದಸ್ಯತ್ವ ಪಡೆಯುವ ಅಭಿಯಾನ ಶುರುವಾಗಿದ್ದು, ಈಗಾಗಲೆ 80 ಪ್ರತಿಶತ ಜನರಿಗೆ ಬಿಜೆಪಿ ಸದಸ್ಯತ್ವ ನೀಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 1 ಲಕ್ಷದಂತೆ ಸದಸ್ಯತ್ವ ಅಭಿಯಾನ ಗುರಿ ನಿಗದಿ ಪಡಿಸಲಾಗಿದೆ ಎಂದರು.
ಈಗಾಗಲೆ ಜಿಲ್ಲೆಯಲ್ಲಿ ಭೂತ ವಿಜಯ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ. ಈ ತಿಂಗಳ ಕೊನೆಯ ರವಿವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ವಿಚಾರವನ್ನು ಪ್ರತಿ ಭೂತ ಮಟ್ಟದ 100 ಮನೆಗಳಲ್ಲಿ ಪ್ರಚೂರು ಪಡಿಸುವ ಅಭಿಯಾನಕ್ಕೆ ಕಾರ್ಯಕರ್ತರು ಸಜ್ಜಾಗಿದ್ದಾರೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ ಮಾತನಾಡಿ, ಭೂತ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಎಲ್ಲ ಮನೆಗಳಿಗೆ ಸಂಪರ್ಕ ಮಾಡುವುದು, ಪ್ರತಿ ಮನೆಗೆ ಸರ್ಕಾರದ ಸಾಧನೆಗಳ ಕರಪತ್ರ ಮತ್ತು ಸ್ಟಿಕ್ಕರ್ ವಿತರಣೆ ಮಾಡಲಾಗುವುದು. ಮಿಸ್ಡ್ ಕಾಲ್ ನೀಡುವ ಮೂಲಕ ಸದಸ್ಯತ್ವ ಅಭಿಯಾನ ಮುಂದುವರಿಸುವುದು ಆ ನಂತರ ಫಲಾನುಭವಿಗಳೊಂದಿಗೆ ಸಂಪರ್ಕ, ಪ್ರತಿ ಭೂತ ವ್ಯಾಪ್ತಿಯಲ್ಲಿ 10 ಗೋಡೆ ಬರಹಗಳು ಹಾಗೂ 1 ಡಿಜಿಟಲ್ ಗೋಡೆ ಬರಹವನ್ನು ಹಾಕಲಾಗುವುದು. ಗೋಡೆ ಬರಹಗಳ ಮಾದರಿಯನ್ನು ರಾಜ್ಯದಿಂದ ಕೇಂದ್ರಕ್ಕೆ ಕಳುಹಿಸಲಾಗುವುದು ಹೀಗೆ ಅನೇಕ ಪ್ರಚಾರ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಜಿಲ್ಲೆಯ ಪ್ರತಿಯೊಂದು ಮನೆಗೆ ಸರ್ಕಾರದ ಯೋಜನೆ ತಲುಪಿಸಿಸುವ ಕಾರ್ಯ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ರಘುನಾಥರಾವ ಮಲ್ಕಾಪುರೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರಹಂತ ಸಾವಳೆ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಲುಂಬಿಣಿ ಗೌತಮ್, ಹಿರಿಯ ಮುಖಂಡ ಗುರುನಾಥ ಕೊಳ್ಳೂರ, ಪ್ರಮುಖರಾದ ಮಲ್ಲಿಕಾರ್ಜುನ ಕುಂಬಾರ, ಶಶಿ ಹೊಸಳ್ಳಿ, ಬಾಬು ವಾಲಿ, ಮಹೇಶ ಪಾಲಮ್, ಬಸವರಾಜ ಜೋಜನಾ ಹಾಗೂ ಇತರರು ಉಪಸ್ಥಿತರಿದ್ದರು.


ಕಾಂಗ್ರೆಸ್ ಸರ್ಕಾರ ಈ ಹಿಂದೆ ಜಾತಿ ಬಲ, ಹಣ ಬಲ, ತೋಳ್ಬಲ್ ನಕಾರಾತ್ಮಕ ವಿಚಾರಗಳು ಸೇರಿದಂತೆ ಇತರೆ ಜನ ವಿರೋಧಿ ಯೋಜನೆಗಳನ್ನು ಮುಂದಿಟ್ಟುಕೊಂಡು ಸರ್ಕಾರ ನಡೆಸಿದ್ದು, ಇಂತಹ ನಕಾರಾತ್ಮಕ ಧೋರಣೆಯನ್ನು ಜನ ಧಿಕ್ಕರಿಸಿ ಕೇಂದ್ರ ಹಾಗೂ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ತರುವಲ್ಲಿ ಯಶಸ್ವಿಯಾಗಿದ್ದಾರೆ. 1999ರಲ್ಲಿ ಬೀದರ್ ಜಿಲ್ಲೆಯಲ್ಲಿ 5 ಜನ ಬಿಜೆಪಿ ಶಾಸಕರು ಗೆದ್ದಿದ್ದು, 2023ರಲ್ಲಿ ಅದು ಪುನರಾವರ್ತನೆಯಾಗಲಿದೆ ಎಂದರು.