
ಬೀದರ್: ಆ.18:ಚಿತ್ರದುರ್ಗದ ಸಾಣೇಹಳ್ಳಿ ಶಿವಸಂಚಾರ ಕಲಾ ತಂಡದವರು ಬಸವಣ್ಣನವರ 38 ವಚನಗಳ ಹಿಂದಿ ನೃತ್ಯರೂಪಕವನ್ನು ಆಗಸ್ಟ್ 21ರಂದು ನಗರದ ಡಾ. ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಪ್ರಸ್ತುತಪಡಿಸಲಿದ್ದಾರೆ’ ಎಂದು ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಬಸವರಾಜ ಧನ್ನೂರ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತುಮ್ಹಾರೆ ಸಿವಾ ಔರ್ ಕೋಯಿ ನಹೀ ಹೈ’ (ನೀ ನಲ್ಲದೆ ಮತ್ತಾರೂ ಇಲ್ಲವಯ್ಯ) ಶೀರ್ಷಿಕೆ ಅಡಿ ಬಸವೇಶ್ವರರ 38 ವಚನಗಳ ನೃತ್ಯರೂಪಕವನ್ನು 30 ಜನ ಯುವತಿಯರೇ ಪ್ರಸ್ತುತಪಡಿಸುತ್ತಿರುವುದು ವಿಶೇಷ ಎಂದು ಮಾಹಿತಿ ಹಂಚಿಕೊಂಡರು.
ಅಂದು ಸಂಜೆ 7ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು ಉದ್ಘಾಟಿಸುವರು. ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳುವರು. ಅರ್ಧ ಗಂಟೆ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಅದಾದ ನಂತರ 55 ನಿಮಿಷಗಳ ಧ್ವನಿ ಮತ್ತು ಬೆಳಕಿನ ವೈಭವದಿಂದ ಕೂಡಿರುವ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ಶಿವಸಂಚಾರ ಕಲಾ ತಂಡದ ಈ ನೃತ್ಯರೂಪಕಕ್ಕೆ ಜುಲೈ 2ರಂದು ಚಾಲನೆ ಕೊಡಲಾಗಿತ್ತು. ಇದುವರೆಗೆ ದೇಶದ 16 ರಾಜ್ಯಗಳಲ್ಲಿ ಪ್ರದರ್ಶನ ಕಂಡಿದೆ. ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಅವರ ಪರಿಕಲ್ಪನೆ ಮೂಡಿಬಂದಿದೆ. ಬಸವಾದಿ ಶರಣರ ವಿಚಾರಧಾರೆಗಳನ್ನು ಪ್ರಚುರಪಡಿಸುವುದು ಇದರ ಉದ್ದೇಶ ಎಂದು ಮಾಹಿತಿ ಹಂಚಿಕೊಂಡರು.
ವಚನಗಳು ಹುಟ್ಟಿಕೊಂಡಿರುವ ನೆಲವಿದು. ವಚನಗಳನ್ನು ವಿಶ್ವದ ಜನರಿಗೆ ತಲುಪಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಶರಣರ ವಿಚಾರಗಳಿಗೆ ಯಾವುದೇ ಜಾತಿ, ಭೇದ ಇಲ್ಲ. ಸಮಾನತೆಗಾಗಿ ಅವರು ಶ್ರಮಿಸಿದ್ದರು. ಹಿಂದಿ ಭಾಷೆಯಲ್ಲಿ ನೃತ್ಯರೂಪಕ ಪ್ರದರ್ಶನಗೊಳ್ಳುತ್ತಿರುವುದು ವಿಶೇಷ ಎಂದರು.
ಯುವ ಮುಖಂಡ ವಿರೂಪಾಕ್ಷ ಗಾದಗಿ ಮಾತನಾಡಿ, ಶ್ರಾವಣ ಮಾಸದ ಅಂಗವಾಗಿ ಜಿಲ್ಲೆಯ ಎಲ್ಲಾ ದೇವಸ್ಥಾನ, ಮಠಗಳಲ್ಲಿ ಸಂಜೆ ಪ್ರವಚನ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೆ, ಆ. 21ರಂದು ಸಂಜೆ ನೃತ್ಯರೂಪಕ ನಡೆಯಲಿದ್ದು, ಆ ದಿನ ಪ್ರವಚನಕ್ಕೆ ಬಿಡುವು ಕೊಟ್ಟು ಸ್ವಾಮೀಜಿಗಳು, ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ವೀಕ್ಷಿಸಬೇಕು. ನೃತ್ಯರೂಪಕಗಳ ಮೂಲಕ ವಚನಗಳ ಪ್ರಚಾರ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಹೇಳಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರು ಆ ದಿನ ಬಿಡುವು ಮಾಡಿಕೊಂಡು ಕಾರ್ಯಕ್ರಮ ಕಣ್ತುಂಬಿಕೊಳ್ಳಬಹುದು ಎಂದರು.
ರಾಷ್ಟ್ರೀಯ ಬಸವ ದಳ, ಜಾಗತಿಕ ಲಿಂಗಾಯತ ಮಹಾಸಭಾ, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಉಚಿತ ಪ್ರವೇಶ ಪ್ರಧಾನಿ ಮೆಚ್ಚುಗೆ
‘ನೃತ್ಯರೂಪಕ ಕಾರ್ಯಕ್ರಮಕ್ಕೆ ಬರುವವರಿಗೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ಸಂಪೂರ್ಣವಾಗಿ ಉಚಿತವಾಗಿರಲಿದೆ. ಬಸವ ಪಂಚಮಿ ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದೇಶದ ಹಲವು ರಾಜ್ಯಗಳಲ್ಲಿ ನೃತ್ಯರೂಪಕ ಪ್ರದರ್ಶನಗೊಂಡಿದೆ. ಜಿಲ್ಲೆಯ ಸಾರ್ವಜನಿಕರು ಇದನ್ನು ಕಣ್ತುಂಬಿಕೊಳ್ಳಬೇಕು’ ಎಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ ಮನವಿ ಮಾಡಿದರು. ‘ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ನೃತ್ಯರೂಪಕದ ಕುರಿತು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಪತ್ರ ಬರೆದು ಅದರ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಅದರ ಮಹತ್ವ ಎಷ್ಟಿದೆ ಎನ್ನುವುದನ್ನು ಇದರಿಂದಲೇ ಅರಿಯಬಹುದು’ ಎಂದು ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಬಸವರಾಜ ಧನ್ನೂರ ತಿಳಿಸಿದರು.